ಉತ್ತರ ಪ್ರದೇಶ | ಪೊಲೀಸ್ ಠಾಣಾಧಿಕಾರಿ ವಿರುದ್ಧ 'ಡಿಜಿಟಲ್ ಲಂಚ’ದ ಆರೋಪ

ಸಾಂದರ್ಭಿಕ ಚಿತ್ರ | PC : PTI
ಲಕ್ನೋ,ಸೆ.5: ಡಿಜಿಟಲ್ ಜಾಡು ತಪ್ಪಿಸಲು ಮತ್ತು ಸಿಕ್ಕಿಬೀಳುವ ಅಪಾಯದಿಂದ ಪಾರಾಗಲು ಲಂಚ ವಿನಿಮಯದಂತಹ ಅಕ್ರಮ ವಹಿವಾಟುಗಳನ್ನು ಹೆಚ್ಚಾಗಿ ನಗದು ರೂಪದಲ್ಲಿಯೇ ನಡೆಸಲಾಗುತ್ತದೆ. ಆದರೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ‘ಡಿಜಿಟಲ್ ಲಂಚ’ದ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದ್ದು, ವಹಿವಾಟುಗಳ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ದೀರ್ಘಕಾಲದಿಂದ ಹಥಿಗವಾನ್ ಪೋಲಿಸ್ ಠಾಣೆಯ ಉಸ್ತುವಾರಿ ಅಧಿಕಾರಿಯಾಗಿರುವ ನಂದಲಾಲ್ ಪತ್ನಿ ಮತ್ತು ಮಗಳು ಸೇರಿದಂತೆ ತನ್ನ ಕುಟುಂಬ ಸದಸ್ಯರು ಮತ್ತು ಇತರ ಪರಿಚಯಸ್ಥರ ಮೂಲಕ ಆನ್ ಲೈನ್ ನಲ್ಲಿ ಲಂಚವನ್ನು ಸ್ವೀಕರಿಸುತ್ತಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
ಫೆಬ್ರವರಿ ಮತ್ತು ಆಗಸ್ಟ್ ನಲ್ಲಿ ನಡೆಸಲಾದ ಕೆಲವು ವಹಿವಾಟುಗಳ ಸ್ಕ್ರೀನ್ಶಾಟ್ಗಳು ನಂದಲಾಲ್ರ ಕುಟುಂಬ ಸದಸ್ಯರಿಗೆ 25,000 ರೂ.ವರ್ಗಾವಣೆಯಾಗಿದ್ದನ್ನು ತೋರಿಸಿವೆ.
‘ಡಿಜಿಟಲ್ ಲಂಚ’ವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲಿಸ್ ಇಲಾಖೆಯು ಈ ಬಗ್ಗೆ ವಿಚಾರಣೆಗೆ ಆದೇಶಿಸಿದೆ.





