‘ಡಿಜಿಟಲ್ ಅರೆಸ್ಟ್’ ವಂಚನೆಯಿಂದ 1.2 ಕೋಟಿ ರೂ. ನಷ್ಟ : 83 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಸಾಂದರ್ಭಿಕ ಚಿತ್ರ | Photo Credit : freepik.com
ಪುಣೆ, ಅ. 30: ‘ಡಿಜಿಟಲ್ ಎರೆಸ್ಟ್’ ವಂಚನೆಗೆ ಒಳಗಾಗಿ 1.2 ಕೋ.ರೂ. ಕಳೆದುಕೊಂಡ ಬಳಿಕ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಪೊಲೀಸ್ ಹಾಗೂ ಸಿಬಿಐ ಅಧಿಕಾರಿಗಳಂತೆ ಪರಿಚಯಿಸಿಕೊಂಡ ಇಬ್ಬರು ವಂಚಕರು 83 ವರ್ಷದ ಈ ವ್ಯಕ್ತಿ ಹಾಗೂ ಅವರ ಪತ್ನಿಯನ್ನು ‘‘ಡಿಜಿಟಲ್ ಅರೆಸ್ಟ್’’ಗೆ ಒಳಪಡಿಸಿ 1.2 ಕೋ.ರೂ. ವಂಚಿಸಿದ್ದರು. ಇದಾದ ಒಂದು ತಿಂಗಳ ಬಳಿಕ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿವೃತ್ತ ಸರಕಾರಿ ಅಧಿಕಾರಿಯಾಗಿರುವ ಈ ವ್ಯಕ್ತಿಗೆ ವಂಚಕರು ಬೆದರಿಕೆ ಒಡ್ಡಿದ್ದರು. ಪ್ರಮುಖ ವ್ಯಕ್ತಿಯೋರ್ವರು ಭಾಗಿಯಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಇದೆ ಎಂದು ಪ್ರತಿಪಾದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಒಂದು ವಾರಗಳ ಬಳಿಕ ಅವರ ಪತ್ನಿ ಮಂಗಳವಾರ ದೂರು ದಾಖಲಿಸಿದ್ದಾರೆ ಎಂದು ಸೈಬರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಈ ವ್ಯಕ್ತಿಗೆ ಆಗಸ್ಟ್ನಲ್ಲಿ ಕೊಲಬಾ ಪೊಲೀಸ್ ಠಾಣೆಯ ಅಧಿಕಾರಿಯೆಂದು ವ್ಯಕ್ತಿಯೋರ್ವ ಕರೆ ಮಾಡಿದ್ದ. ಕರೆ ಮಾಡಿದಾತ ನರೇಶ್ ಗೋಯಲ್ ಹಣ ಅಕ್ರಮ ವರ್ಗಾವಣೆ ಪ್ರಕರಣ ಉಲ್ಲೇಖಿಸಿದ್ದ. ಈ ಪ್ರಕರಣದಲ್ಲಿ ಅವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದ. ಆದರೆ, ಅವರು ನಿರಾಕರಿಸಿದ್ದಾರೆ. ಇನ್ನೊಂದು ವೀಡಿಯೊ ಕರೆ ಸಂದರ್ಭ ಇಬ್ಬರು ವಂಚಕರು ಐಪಿಎಸ್ ಅಧಿಕಾರಿ ವಿಜಯ್ ಖನ್ನಾ ಹಾಗೂ ಸಿಬಿಐ ಅಧಿಕಾರಿ ದಯಾ ನಾಯಕ್ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ, ಅವರನ್ನು ಹಾಗೂ ಅವರ ಪತ್ನಿಯನ್ನು ಬಂಧಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







