ಬಿಜೆಪಿ-ಆರೆಸ್ಸೆಸ್ ಅನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್!

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (File Photo: PTI)
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಮತ್ತು ಆರೆಸ್ಸೆಸ್ನ ಸಂಘಟನಾ ಸಾಮರ್ಥ್ಯವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವಿವಾದವನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೆ ಅವರು ನಾನು "ಬಿಜೆಪಿ ಮತ್ತು ಆರೆಸ್ಸೆಸ್ನ ಕಟ್ಟಾ ವಿರೋಧಿ" ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ವೇಳೆ ಸಂಘಟನೆಯ ಪುನಶ್ಚೇತನ ಬಯಸಿದ್ದೀರಾ ಎಂದು ಕೇಳಿದಾಗ, ವಾಸ್ತವವಾಗಿ ನಾನು ಪಕ್ಷದ ಸಂಘಟನೆಯನ್ನು ಶ್ಲಾಘಿಸಿದ್ದೇನೆ. ನೀವು ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ನಾನು ಬಿಜೆಪಿ ಮತ್ತು ಆರೆಸ್ಸೆಸ್ನ ಕಟ್ಟಾ ವಿರೋಧಿ ಎಂದು ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ಫೋಟೊವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ನ ಸಂಘಟನಾ ಶಕ್ತಿಯನ್ನು ಶ್ಲಾಘಿಸಿದ್ದರು. ಪೋಟೊದಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಗುಜರಾತ್ನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮತ್ತು ನರೇಂದ್ರ ಮೋದಿ ಅವರು ಅಡ್ವಾಣಿ ಅವರ ಬಳಿ ನೆಲದ ಮೇಲೆ ಕುಳಿತಿರುವುದು ಕಂಡು ಬರುತ್ತದೆ. ಪೋಸ್ಟ್ನಲ್ಲಿ ʼಒಬ್ಬ ತಳಮಟ್ಟದ ಆರೆಸ್ಸೆಸ್ ಮತ್ತು ಜನಸಂಘದ ಕಾರ್ಯಕರ್ತ ಹೇಗೆ ನಾಯಕರ ಪಾದಗಳ ಕೆಳಗೆ ಕುಳಿತು ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯಾದರು, ಇದು ಸಂಘಟನೆಯ ಶಕ್ತಿʼ ಎಂದು ಬರೆದುಕೊಂಡಿದ್ದರು.
ಸಿಂಗ್ ಅವರ ಟ್ವೀಟ್ ಬೆನ್ನಲ್ಲೆ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದೆ. ಪಕ್ಷದ ವಕ್ತಾರ ಸಿ.ಆರ್. ಕೇಶವನ್ ಈ ಕುರಿತು ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ನಾಯಕತ್ವದ "ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ" ನಿಲುವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ.
"ಕಾಂಗ್ರೆಸ್ನ ಮೊದಲ ಕುಟುಂಬ ಪಕ್ಷವನ್ನು ಹೇಗೆ ನಿರ್ದಯವಾಗಿ ಸರ್ವಾಧಿಕಾರಿ ರೀತಿಯಲ್ಲಿ ನಡೆಸುತ್ತಿದೆ ಮತ್ತು ಈ ಕಾಂಗ್ರೆಸ್ ನಾಯಕತ್ವ ಎಷ್ಟು ನಿರಂಕುಶಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದ ದಿಗ್ವಿಜಯ ಸಿಂಗ್ ಅವರ ಆಘಾತಕಾರಿ ಸತ್ಯದ ಬಗ್ಗೆ ಪ್ರತಿಕ್ರಿಯಿಸಲು ರಾಹುಲ್ ಗಾಂಧಿ ಧೈರ್ಯ ತೋರುತ್ತಾರೆಯೇ?" ಎಂದು ಸಿ.ಆರ್.ಕೇಶವನ್ ಪ್ರಶ್ನಿಸಿದ್ದಾರೆ.







