ಚುನಾವಣಾ ಆಯೋಗದ ಅಧಿಕಾರದಲ್ಲಿ ಹಸ್ತಕ್ಷೇಪ ಬೇಡ: ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ EC

Photo credit: PTI
ಹೊಸದಿಲ್ಲಿ: ದೇಶಾದ್ಯಂತ ನಿಯಮಿತ ಅವಧಿಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡುವುದು ಚುನಾವಣಾ ಆಯೋಗದ (EC) ವಿಶೇಷ ಸಾಂವಿಧಾನಿಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದ ಹಾಗೆ ಆಗುತ್ತದೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಆಯೋಗ ತನ್ನ ಅಫಿಡವಿಟ್ ನಲ್ಲಿ, ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಸುವ ಸ್ವರೂಪ ಮತ್ತು ಸಮಯವನ್ನು ನಿರ್ಧರಿಸುವ ಅಧಿಕಾರ ಸಂಪೂರ್ಣವಾಗಿ ತನ್ನದ್ದೇ ಆಗಿದೆ ಎಂದು ವಾದಿಸಿದೆ.
ಸಂವಿಧಾನದ ವಿಧಿ 324 ಪ್ರಕಾರ, ಚುನಾವಣೆಗಳ ನಿರ್ವಹಣೆ, ಮೇಲ್ವಿಚಾರಣೆ ಮತ್ತು ನಿಯಂತ್ರಣ ಸಂಬಂಧಿಸಿದ ಎಲ್ಲಾ ಅಧಿಕಾರ ಆಯೋಗಕ್ಕೇ ಸೇರಿದೆ ಎಂದು ಉಲ್ಲೇಖಿಸಲಾಗಿದೆ. 1950ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 21 ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 25 ಕೂಡ ಈ ಸಂಬಂಧ ಆಯೋಗಕ್ಕೆ ಸಂಪೂರ್ಣ ವಿವೇಚನಾ ಹಕ್ಕು ನೀಡುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
ಮತದಾರರ ಪಟ್ಟಿಗಳ ಶುದ್ಧತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನು ಅರಿತುಕೊಂಡಿರುವ ಆಯೋಗವು, ಜುಲೈ 5, 2025ರಂದು ಬಿಹಾರ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಹೊಸ SIR ಗಾಗಿ ಪೂರ್ವಚಟುವಟಿಕೆ ಆರಂಭಿಸಲು ಸೂಚನೆ ನೀಡಿದೆ. ಅದರಂತೆ, ಜನವರಿ 1, 2026 ರಿಂದ ಉಳಿದ ರಾಜ್ಯಗಳು SIR ಪ್ರಾರಂಭ ಮಾಡಬಹುದು.
ಈ ನಡುವೆ, ಬಿಹಾರದಲ್ಲಿ ನಡೆಯುತ್ತಿರುವ SIR ಗಂಭೀರ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳು ಈ ಪ್ರಕ್ರಿಯೆಯಿಂದ ಕೆಲವು ಸಮುದಾಯಗಳ ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸುತ್ತಿವೆ. ಆದರೆ, ನಕಲಿ ಹೆಸರುಗಳು, ಮೃತ ವ್ಯಕ್ತಿಗಳ ಹೆಸರುಗಳು ಹಾಗೂ ಅಸಂವಿಧಾನಿಕ ದಾಖಲಾತಿಗಳನ್ನು ತೆಗೆಯುವ ಮೂಲಕ ಮತದಾರರ ಪಟ್ಟಿಯನ್ನು ಶುದ್ಧಗೊಳಿಸುವುದೇ ಉದ್ದೇಶವೆಂದು ಆಯೋಗ ಸ್ಪಷ್ಟಪಡಿಸಿದೆ.
ಜೂನ್ 24, 2025ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬಿಹಾರದ ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 30ರಂದು ಪ್ರಕಟಿಸಲಾಗುವುದು. ಪ್ರಾಥಮಿಕ ವರದಿಗಳ ಪ್ರಕಾರ, ಮತದಾರರ ಸಂಖ್ಯೆ 7.9 ಕೋಟಿಯಿಂದ 7.24 ಕೋಟಿಗೆ ಇಳಿಕೆಯಾಗಿದೆ.
ದೇಶದ ಇತರ ರಾಜ್ಯಗಳಲ್ಲಿಯೂ ಹಂತ ಹಂತವಾಗಿ SIR ಪ್ರಕ್ರಿಯೆ ಮುಂದುವರಿಯಲಿದೆ ಎಂದು ಆಯೋಗ ತಿಳಿಸಿದ್ದು, ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.







