ಮಹಾರಾಷ್ಟ್ರ | ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು; ಪೊಲೀಸರಿಂದ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಕೆ
“ಕುಟುಂಬದೊಂದಿಗಿನ ವ್ಯಾಜ್ಯದಿಂದಾಗಿ ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು”

ದಿಶಾ ಸಾಲಿಯಾನ್ | Photo : indiatoday
ಮುಂಬೈ: ‘ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನಲ್ಲಿ ಯಾವುದೇ ದುಷ್ಕೃತ್ಯ ನಡೆದಿಲ್ಲ’ ಎಂದು ಮುಂಬೈ ಪೊಲೀಸರು ಹೈಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಮ್ಮ ಮಗಳ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಅವರ ತಂದೆ ಸತೀಶ್ ಸಾಲಿಯಾನ್ ಒತ್ತಾಯಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಗಡ್ಕರಿ ನೇತೃತ್ವದ ಪೀಠವು ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.
‘ದಿಶಾ ಸಾಲಿಯಾನ್ 2020ರ ಜೂನ್ 8ರಂದು ಮುಂಬೈನ ಮಾಲಾಡ್ ಪ್ರದೇಶದಲ್ಲಿರುವ ತಮ್ಮ ಫ್ಲ್ಯಾಟ್ನ 14ನೇ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ದೇಹದ ಮೇಲೆ ದೈಹಿಕ ಹಲ್ಲೆ ನಡೆದಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ತಮ್ಮ ಕುಟುಂಬದೊಂದಿಗಿನ ವ್ಯಾಜ್ಯದಿಂದಾಗಿ ಅವರು ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು’ ಎಂಬ ಅಂಶವು ಮುಂಬೈ ಪೊಲೀಸರು ಹೈಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿದೆ.
ತಮ್ಮ ಮಗಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಪುನರುಚ್ಚರಿಸಿದ್ದಾರೆ.







