ವಂಚಕ ಚಾಲಕ, ಪಾನಮತ್ತ ಬೈಕ್ ಸವಾರ: ಆಂಧ್ರ ಬಸ್ ದುರಂತಕ್ಕೆ ಕಾರಣಗಳೇನು?

Photo Credit : NDTV
ಹೈದರಾಬಾದ್,ಅ.26: ನಕಲಿ ಶೈಕ್ಷಣಿಕ ಪ್ರಮಾಣಪತ್ರದ ಆಧಾರದಲ್ಲಿ ಚಾಲನಾ ಪರವಾನಿಗೆ ಗಿಟ್ಟಿಸಿಕೊಂಡಿದ್ದ ಬಸ್ ಚಾಲಕ ಮತ್ತು ಪಾನಮತ್ತನಾಗಿ ಬೈಕ್ ಚಲಾಯಿಸಿದ್ದ ಸವಾರ; ಆಂಧ್ರಪ್ರದೇಶದ ಕರ್ನೂಲಿನಲ್ಲಿ 20 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಬಸ್ ಬೆಂಕಿ ದುರಂತವು ನಮ್ಮ ರಸ್ತೆ ಸುರಕ್ಷತಾ ಪ್ರಕ್ರಿಯೆಗಳಲ್ಲಿನ ಕೊರತೆಗಳು ಹೇಗೆ ವಿನಾಶಕಾರಿ ಪರಿಣಾಮಗಳನ್ನು ಬೀರಬಲ್ಲವು ಎನ್ನುವುದನ್ನು ತೋರಿಸಿವೆ.
ಭೀಕರ ಅಪಘಾತಕ್ಕೆ ತುತ್ತಾದ ಡಬಲ್-ಡೆಕ್ಕರ್ ಬಸ್ಸಿನ ಚಾಲಕ ಮಿರಿಯಾಲ ಲಕ್ಷ್ಮಯ್ಯನನ್ನು ಪೋಲಿಸರು ಬಂಧಿಸಿದ್ದಾರೆ. ಕೇವಲ ಐದನೇ ತರಗತಿಯವರೆಗೆ ಓದಿರುವ ಲಕ್ಷ್ಮಯ್ಯ ನಕಲಿ 10ನೇ ತರಗತಿ ಪ್ರಮಾಣಪತ್ರವನ್ನು ಸಲ್ಲಿಸಿ ಘನ ವಾಹನ ಚಾಲನಾ ಪರವಾನಿಗೆಯನ್ನು ಪಡೆದುಕೊಂಡಿದ್ದನ್ನು ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ. ಪರವಾನಿಗೆ ನಿಯಮಗಳ ಪ್ರಕಾರ ಸಾರಿಗೆ ವಾಹನಗಳ ಚಾಲಕರು ಕನಿಷ್ಠ 8ನೇ ತರಗತಿಯವರೆಗೆ ಓದಿರುವುದು ಅಗತ್ಯವಾಗಿದೆ. ಆದಾಗ್ಯೂ ಈ ನಿಯಮಗಳು ಹೆಚ್ಚಾಗಿ ಉಲ್ಲಂಘನೆಯಾಗುತ್ತವೆ ಮತ್ತು ಜನರು ವಾಹನ ಚಾಲನಾ ಪರವಾನಿಗೆಗಳನ್ನು ಪಡೆದುಕೊಳ್ಳಲು ನಕಲಿ ಶೈಕ್ಷಣಿಕ ದಾಖಲೆಗಳನ್ನು ಬಳಸುತ್ತಾರೆ.
►ಕರ್ನೂಲು ದುರಂತ ಸಂಭವಿಸಿದ್ದು ಹೇಗೆ?
ಶುಕ್ರವಾರ ಬೆಳಗಿನ ಜಾವ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಕರ್ನೂಲು ಜಿಲ್ಲೆಯ ಚಿನ್ನಟೇಕೂರಿನ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಸ್ಕಿಡ್ ಆದ ಬೈಕ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಬೈಕ್ ಚಲಾಯಿಸುತ್ತಿದ್ದ ಶಿವಶಂಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಹಿಂಬದಿ ಸವಾರ ಎರ್ರಿ ಸ್ವಾಮಿ ಗಾಯಗೊಂಡಿದ್ದ. ಅಪಘಾತದ ಬಳಿಕ ಸ್ವಾಮಿ ಶಿವಶಂಕರ್ನನ್ನು ರಸ್ತೆಯಂಚಿಗೆ ಎಳೆತಂದಾಗ ಆತ ಮೃತಪಟ್ಟಿದ್ದಾನೆ ಎನ್ನುವುದು ಗೊತ್ತಾಗಿತ್ತು. ಆತ ಬೈಕ್ನ್ನು ರಸ್ತೆಯಿಂದ ತೆರವುಗೊಳಿಸುವ ಮುನ್ನವೇ ವೇಗವಾಗಿ ಬಂದ ಡಬಲ್ ಡೆಕ್ಕರ್ ಬಸ್ ಅದರ ಮೇಲೆಯೇ ಹಾದು ಹೋಗಿದ್ದು, ಸುಮಾರು ದೂರದವರೆಗೆ ಬೈಕ್ ಅದರಡಿಯಲ್ಲಿ ಸಿಕ್ಕಿಕೊಂಡಿತ್ತು. ಈ ವೇಳೆ ಘರ್ಷಣೆಯಿಂದ ಕಿಡಿ ಹಾರಿ ಬೈಕಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿತ್ತು. ಇದರಿಂದ ಹುಟ್ಟಿಕೊಂಡ ಬೆಂಕಿಯ ಬೃಹತ್ ಜ್ವಾಲೆಗಳು ಡಬಲ್-ಡೆಕ್ಕರ್ ಬಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. 19 ಪ್ರಯಾಣಿಕರು ಸಜೀವವಾಗಿ ದಹನಗೊಂಡಿದ್ದರೆ ಇತರರು ತುರ್ತು ನಿರ್ಗಮನ ದ್ವಾರ ಮತ್ತು ಕಿಟಕಿಗಳಿಂದ ಹೊರಕ್ಕೆ ಹಾರಿ ಜೀವವನ್ನು ಉಳಿಸಿಕೊಂಡಿದ್ದರು.
ಪೋಲಿಸರು ತಿಳಿಸಿರುವ ಪ್ರಕಾರ ಈ ಭೀಕರ ದುರಂತಕ್ಕೆ ಕೆಲವೇ ಕ್ಷಣಗಳ ಮುನ್ನ ಆ ರಸ್ತೆಯಲ್ಲಿ ಬಂದಿದ್ದ ಎರಡು ಬಸ್ ಗಳು ಬೈಕ್ ಅನ್ನು ತಪ್ಪಿಸಿಕೊಂಡು ಮುಂದಕ್ಕೆ ಸಾಗಿದ್ದವು. ಆದರೆ ಲಕ್ಷ್ಮಯ್ಯ ರಸ್ತೆ ಮಧ್ಯೆ ಬಿದ್ದಿದ್ದ ಬೈಕ್ನ್ನು ಗುರುತಿಸುವಲ್ಲಿ ವಿಫಲಗೊಂಡಿದ್ದ.
►ಬೈಕ್ ಸವಾರ ಪಾನಮತ್ತನಾಗಿದ್ದ: ಪೋಲಿಸ್
ಶಿವಶಂಕರ್ ಮತ್ತು ಎರ್ರಿ ಸ್ವಾಮಿ ಇಬ್ಬರೂ ಮದ್ಯ ಸೇವಿಸಿದ್ದರು ಎನ್ನುವುದನ್ನು ವಿಧಿವಿಜ್ಞಾನ ಪರೀಕ್ಷೆಯು ದೃಢಪಡಿಸಿದೆ ಎಂದು ಕರ್ನೂಲು ವಲಯ ಡಿಐಜಿ ಕೋಯಾ ಪ್ರವೀಣ ಸುದ್ದಿಸಂಸ್ಥೆಗೆ ತಿಳಿಸಿದರು. ಇಬ್ಬರೂ ರಾತ್ರಿ ಧಾಬಾವೊಂದರಲ್ಲಿ ಊಟ ಮಾಡಿದ್ದರು ಮತ್ತು ಮದ್ಯ ಸೇವಿಸಿದ್ದನ್ನು ಸ್ವಾಮಿ ಒಪ್ಪಿಕೊಂಡಿದ್ದಾನೆ ಎಂದರು.
ಪೋಲಿಸರು ತಿಳಿಸಿರುವಂತೆ ನಸುಕಿನ ಎರಡು ಗಂಟೆಯ ಸುಮಾರಿಗೆ ಅವರಿಬ್ಬರೂ ಮನೆಗೆ ಮರಳುತ್ತಿದ್ದು, ಮೊದಲು ಸ್ವಾಮಿಯನ್ನು ಮನೆಗೆ ಬಿಡಲು ಶಿವಶಂಕರ್ ಉದ್ದೇಶಿಸಿದ್ದ. ಮಾರ್ಗಮಧ್ಯೆ ಪೆಟ್ರೋಲ್ ಬಂಕ್ ವೊಂದರಲ್ಲಿ ಅವರು ಬೈಕ್ ನಿಲ್ಲಿಸಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಂಕ್ ನಿಂದ ಹೊರಗೆ ಹೋಗುವಾಗ ಶಿವಶಂಕರ್ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ್ದು ವೀಡಿಯೊದಲ್ಲಿ ಕಂಡು ಬಂದಿದೆ.







