ʼಕೇರಳ ಸ್ಟೋರಿʼ ಪ್ರದರ್ಶನಕ್ಕೆ ಅಡಚಣೆ, ಇಬ್ಬರು ಪೊಲೀಸರ ವಶಕ್ಕೆ
ಗೋವಾದಲ್ಲಿ ಭಾರತೀಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ
File Photo
ಪಣಜಿ: ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಂದು ‘ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ಸ್ಥಳದಲ್ಲಿ ಅಡಚಣೆ ಉಂಟು ಮಾಡಿದ ಆರೋಪದಲ್ಲಿ ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಗೋವಾ ಪೊಲೀಸರು ಕೆಲ ಕಾಲ ವಶಕ್ಕೆ ಪಡೆದ ಘಟನೆ ನಡೆಯಿತು ಎಂದು indianexpress.com ವರದಿ ಮಾಡಿದೆ.
ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಗಳನ್ನು ಶ್ರೀನಾಥ್ ಹಾಗೂ ಅರ್ಚನಾ ದೇವಿ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಕಳೆದ ವಾರದಿಂದ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಇಬ್ಬರನ್ನು ಪಣಜಿ ಠಾಣೆಯ ಪೊಲೀಸರು ಸುಮಾರು 45 ನಿಮಿಷಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಪೊಲೀಸರು ಈ ಈರ್ವರ ಪ್ರತಿನಿಧಿ ಪಾಸ್ ಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ, ಚಲನಚಿತ್ರೋತ್ಸವದ ಉಳಿದ ಅವಧಿಗೆ ಪಾಲ್ಗೊಳ್ಳದಂತೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಕೇರಳ ಸ್ಟೋರಿ’ ಸುಳ್ಳು ಪ್ರಚಾರದ ಚಲನಚಿತ್ರವಾಗಿದ್ದು, ಅದರ ವಿರುದ್ಧ ನಮ್ಮ ಭಿನ್ನಮತವನ್ನು ದಾಖಲಿಸುತ್ತಿದ್ದೇವೆ ಎಂದು ಆ ಈರ್ವರು ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಿರುವನಂತಪುರಂ ಮೂಲದ ಪುಟ ವಿನ್ಯಾಸಕಿ ಅರ್ಚನಾ ದೇವಿ, “ನನ್ನ ಗೆಳೆಯ ಶ್ರೀನಾಥ್ ಹಾಗೂ ನಾನು ಎರಡು ಪುಟಗಳ 50 ಕರಪತ್ರವನ್ನು ಮುದ್ರಿಸಿ, ಚಿತ್ರದಲ್ಲಿನ ಕೆಲವು ಪ್ರತಿಪಾದನೆಗಳನ್ನು ಅಲ್ಲಗಳೆಯುವ ಸತ್ಯಶೋಧನೆ ಮಾದರಿಯ ವಿಷಯವನ್ನು ಹಂಚಿಕೊಂಡಿದ್ದೆವು. ನಾವು ಆ ಕರಪತ್ರಗಳನ್ನು ಕೆಂಪುಹಾಸಿನ ಬಳಿ ಆಸಕ್ತಿ ಹೊಂದಿರುವವರಿಗೆ ಹಂಚುತ್ತಿದ್ದೆವು” ಎಂದು ಹೇಳಿದ್ದಾರೆ.
“ಅಲ್ಲಿ ನಾವು ಯಾವುದೇ ಘೋಷಣೆಗಳನ್ನು ಕೂಗಲಿಲ್ಲ. ಅದು ಪ್ರತಿಭಟನೆಯೂ ಆಗಿರಲಿಲ್ಲ” ಎಂದು ಹೇಳಿರುವ ಆಕೆ, “ನಾವು ಆ ಚಿತ್ರದ ಕುರಿತು ಎ4 ಅಳತೆಯೆ ಮೀಮ್ ವೊಂದನ್ನು ಮುದ್ರಿಸಿ, ಅದನ್ನು ನಮ್ಮ ಟಿ-ಶರ್ಟ್ ಗಳಿಗೆ ಅಂಟಿಸಿಕೊಂಡಿದ್ದೆವು” ಎಂದೂ ತಿಳಿಸಿದ್ದಾರೆ.
“ನಮ್ಮನ್ನು ಪಣಜಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಹಾಗೂ ಅಲ್ಲಿನ ಅಧಿಕಾರಿಗಳು ನಮ್ಮ ಫೋನ್ ಗಳು, ಗುರುತಿನ ಚೀಟಿಗಳು ಹಾಗೂ ಚಲನಚಿತ್ರೋತ್ಸವ ಪ್ರತಿನಿಧಿ ಪಾಸ್ ಗಳನ್ನು ಕಿತ್ತುಕೊಂಡರು. ನಮಗೆ ನಮ್ಮ ಫೋನ್ ಗಳು ಹಾಗೂ ಗುರುತಿನ ಚೀಟಿಗಳನ್ನು ಮರಳಿಸಲಾಯಿತಾದರೂ, ಪ್ರತಿನಿಧಿ ಪಾಸ್ ಗಳನ್ನು ಮುಟ್ಟುಗೋಲು ಹಾಕಿಕೊಂಡರು. ಇದರೊಂದಿಗೆ, ನಮಗೆ ಚಲನಚಿತ್ರೋತ್ಸದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದರು” ಎಂದು ಸಾಕ್ಷ್ಯಚಿತ್ರ ನಿರ್ಮಾಣಕಾರರಾದ ಶ್ರೀನಾಥ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಣಜಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ಅವರಿಬ್ಬರೂ ಇತರ ಪ್ರತಿನಿಧಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಸ್ಥಳದಲ್ಲಿ ಅಡಚಣೆಯುಂಟು ಮಾಡುತ್ತಿದ್ದಾರೆ ಎಂಬ ದೂರನ್ನು ಆಧರಿಸಿ, ಮುಂಜಾಗ್ರತಾ ಕ್ರಮವಾಗಿ ಅವರ ಪ್ರತಿನಿಧಿ ಪಾಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.