ಎಲ್ಲಾ ಸದಸ್ಯರಿಗೆ ವೇದಗಳ ಪ್ರತಿ ಒದಗಿಸಲು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಸಲಹೆ

ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ (PTI)
ಹೊಸದಿಲ್ಲಿ: ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಅವರು ರಾಜ್ಯಸಭೆಯ ಎಲ್ಲಾ ಸದಸ್ಯರಿಗೆ ವೇದಗಳ ಪ್ರತಿ ಒದಗಿಸಲು ಸಲಹೆ ನೀಡಿದ್ದಾರೆ. ರಾಜ್ಯಸಭಾ ಸಭಾಪತಿ ಅವರ ಸಲಹೆಗೆ ಸ್ಪಂದಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತಾವು ತಮ್ಮ ರಾಜ್ಯಸಭೆಯ ಎಲ್ಲಾ ಸಹೋದ್ಯೋಗಿಗಳಿಗೆ ವೇದಗಳ ಪ್ರತಿಯನ್ನು ನೀಡುವುದಾಗಿ ಹೇಳಿದ್ದಾರೆ.
ವೈದಿಕ ಶಾಲೆಗಳ ಕುರಿತಾದ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸುತ್ತಿದ್ದಾಗ, ಸಭಾಪತಿಗಳ ಸಲಹೆ ಬಂತು. ಅಷ್ಟೇ ಅಲ್ಲದೆ ವೇದಗಳ ಪ್ರತಿ ಪಡೆದ ಪ್ರತಿ ಸದಸ್ಯರು ಇತರರಿಗೆ 100 ಪ್ರತಿಗಳನ್ನು ವಿತರಿಸಬೇಕೆಂದೂ ಅವರು ಹೇಳಿದರು.
ವೇದಗಳು ಭಾರತೀಯ ಶಿಕ್ಷಣ ವ್ಯವಸ್ಥೆಯ ಮೂಲ ಭಂಡಾರ ಮತ್ತು ಮೋದಿ ಸರ್ಕಾರವು ವೈದಿಕ ಮಂಡಳಿ ರಚಿಸಿ ವೇದಗಳ ಕಲಿಕೆಯನ್ನು ಔಪಚಾರಿಕಗೊಳಿಸಿದೆ ಎಂದು ಅವರು ಹೇಳಿದರು.
ವೈದಿಕ ಶಿಕ್ಷಣದ ಔಪಚಾರಿಕ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ಸರ್ಕಾರ ಕಳೆದ ವರ್ಷ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ಸಂಸ್ಕೃತ ಶಿಕ್ಷಾ ಮಂಡಳಿ ರಚಿಸಿದೆ ಎಂದು ಅವರು ಹೇಳಿದರು. ವೈದಿಕ ಮಂಡಳಿಯ ಐದು ಪ್ರಾದೇಶಿಕ ಕೇಂದ್ರಗಳನ್ನು ದ್ವಾರಕಾ, ಶೃಂಗೇರಿ, ಬದರೀನಾಥ, ರಾಮೇಶ್ವರಂ ಮತ್ತು ಗುವಹಾಟಿಯಲ್ಲಿ ಸ್ಥಾಪಿಸಲಾಗುವುದು ಎಂದೂ ಅವರು ಹೇಳಿದರು.







