ತಮಿಳುನಾಡಿನಲ್ಲಿ ಎಸ್ಐಆರ್ ವಿರುದ್ಧ ಡಿಎಂಕೆ, ಮಿತ್ರ ಪಕ್ಷಗಳಿಂದ ಪ್ರತಿಭಟನೆ

Photo Credit: X/@mkstalin
ಚೆನ್ನೈ, ನ. 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ವಿರೋಧಿಸಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಮಂಗಳವಾರ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಿದವು.
ಈ ಪ್ರಕ್ರಿಯೆಯನ್ನು ನಿಲ್ಲಿಸುವುದು ಈಗ ಪಕ್ಷದ ಸದಸ್ಯರ ಪ್ರಮುಖ ಕರ್ತವ್ಯ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
‘ಎಕ್ಸ್’ನ ಪೋಸ್ಟ್ ನಲ್ಲಿ ಸ್ಟಾಲಿನ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧದ ಕಾನೂನಾತ್ಮಕ ಹಾಗೂ ಬೀದಿ ಹೋರಾಟದಲ್ಲಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಪಾಲ್ಗೊಂಡಿವೆ. ಎಸ್ಐಆರ್ ಪ್ರಜಾಪ್ರಭುತ್ವದಲ್ಲಿ ಮತ ಹಾಕುವ ಮೂಲ ಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದಿದ್ದಾರೆ.
ಒಂದೆಡೆ ನಾವು ಈಗಾಗಲೇ ಆರಂಭಿಸಲಾಗಿರುವ ಎಸ್ಐಆರ್ ಕೆಲಸಗಳಲ್ಲಿನ ಅಕ್ರಮಗಳನ್ನು ತಡೆಯಲು ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಇಂದು ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟ (ಎಸ್ಐಆರ್) ಎಸ್ಐಆರ್ ವಿರುದ್ಧ ಬೀದಿಗಿಳಿದಿದೆ. ಇದನ್ನು ಮುಂದುವರಿಸೋಣ. ನಮ್ಮ ಜನರ ಮತದಾನದ ಹಕ್ಕನ್ನು ರಕ್ಷಿಸೋಣ ಎಂದು ಅವರು ಹೇಳಿದ್ದಾರೆ.
ಡಿಎಂಕೆ, ಕಾಂಗ್ರೆಸ್, ವಿಸಿಕೆ ಹಾಗೂ ಎಡರಂಗದ ನಾಯಕರು ತಮಿಳುನಾಡಿನಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಿದರು. 2026 ಎಪ್ರಿಲ್-ಮೇಯಲ್ಲಿ ವಿಧಾನ ಸಭೆ ಚುನಾವಣೆಗಳು ನಡೆದ ನಂತರ ಎಸ್ಐಆರ್ ನಡೆಸುವಂತೆ ಅವರು ಭಾರತೀಯ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಪ್ರತಿಭಟನಕಾರರು ಚುನಾವಣಾ ಆಯೋಗದ ವಿರುದ್ಧ ‘‘ಇದು ಭಾರತೀಯ ಚುನಾವಣಾ ಆಯೋಗವವೇ, ಮೋದಿ ಚುನಾವಣಾ ಆಯೋಗವೇ’’, ‘‘ಚುನಾವಣಾ ಆಯೋಗ ಬಿಜೆಪಿಯ ಘಟಕದಂತೆ ಕಾರ್ಯನಿರ್ವಹಿಸುತ್ತಿದೆ’’ ಎಂಬ ಘೋಷಣೆಗಳನ್ನು ಕೂಗಿದರು.







