ಕ್ಷೇತ್ರ ಪುನರ್ವಿಂಗಡಣೆ ಪ್ರಗತಿಪರ ರಾಜ್ಯಗಳಿಗೆ ಮಾರಕ: ಡಿಎಂಕೆ ಸಂಸದ

ಡಿ.ಎಮ್. ಕತೀರ್ ಆನಂದ್ | PC : PTI
ಹೊಸದಿಲ್ಲಿ: ಮುಂಬರುವ ಲೋಕಸಭಾ ಕ್ಷೇತ್ರ ಮರುವಿಂಗಡಣೆಯು ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿರುವ ತಮಿಳುನಾಡಿನಂಥ ರಾಜ್ಯಗಳಿಗೆ ಮಾರಕ ಎಂದು ಡಿಎಮ್ಕೆ ಸಂಸದ ಡಿ.ಎಮ್. ಕತೀರ್ ಆನಂದ್ ಬುಧವಾರ ಹೇಳಿದ್ದಾರೆ ಹಾಗೂ ಸಂಸತ್ನಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತರಿಪಡಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
‘‘ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ವೇಳೆ, ಸರಕಾರವು ಕೇವಲ ಜನಸಂಖ್ಯೆಯನ್ನು ಮಾತ್ರವಲ್ಲ, ಜಿಎಸ್ಡಿಪಿ, ತಲಾವಾರು ಆದಾಯ, ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಮುಂತಾದ ಮಹತ್ವದ ಸೂಚ್ಯಂಕಗಳು ಹಾಗೂ ಆರ್ಥಿಕ ನಿರ್ವಹಣೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು’’ ಎಂದು ಶೂನ್ಯ ಅವಧಿಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಆನಂದ್ ಹೇಳಿದರು.
‘‘ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿರುವುದಕ್ಕಾಗಿ ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ. ಆದರೆ, ಈ ಬಗ್ಗೆ ಕೇಂದ್ರ ಸರಕಾರ ಯಾವುದೇ ಭರವಸೆ ನೀಡಿಲ್ಲ’’ ಎಂದು ಅವರು ನುಡಿದರು.
ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಬೆಟ್ಟು ಮಾಡಿದ ಡಿಎಮ್ಕೆ ಸಂಸದ, ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ತಮಿಳುನಾಡಿಗೆ ಮಾಡುವ ಅನ್ಯಾಯದ ಪರಮಾವಧಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪಶ್ಚಿಮ ಬಂಗಾಳದ ಗಡಿಯ ಮೂಲಕ ಭಾರತ ಪ್ರವೇಶಿಸುವ ಬಾಂಗ್ಲಾದೇಶಿ ನುಸುಳುಕೋರರ ವಿಷಯವನ್ನು ಬಿಜೆಪಿಯ ನಿಶಿಕಾಂತ್ ದುಬೆ ಕೂಡ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಕೇಂದ್ರ ಸರಕಾರವು ಕ್ಷೇತ್ರಪುನರ್ವಿಂಗಡಣೆ ಮಾಡುವಾಗ ಅವರನ್ನು ಹೊರಗಿಡಬೇಕು ಎಂದ ಅವರು ಹೇಳಿದರು.
1951ರ ಜನಗಣತಿಗೆ ಹೋಲಿಸಿದರೆ, 2011ರ ಜನಗಣತಿಯಲ್ಲಿ ಜಾರ್ಖಂಡ್ ನಲ್ಲಿ ಆದಿವಾಸಿಗಳ ಜನಸಂಖ್ಯೆ ಇಳಿದಿದೆ ಎಂದು ದುಬೆ ಹೇಳಿದರು. ಆದರೆ, ಇದೇ ಅವಧಿಯಲ್ಲಿ ಮುಸ್ಲಿಮ್ ಜನಸಂಖ್ಯೆ ಗಣನೀಯವಾಗಿ ಏರಿದೆ ಎಂದರು.