ಜನಸಂಖ್ಯಾ ನಿಯಂತ್ರಣಕ್ಕಾಗಿ ರಾಜ್ಯಗಳನ್ನು ದಂಡಿಸುವ ಪ್ರಯತ್ನಗಳನ್ನು ವಿರೋಧಿಸಲು ಡಿಎಮ್ಕೆ ಸಂಸದರ ನಿರ್ಧಾರ

ಎಮ್.ಕೆ. ಸ್ಟಾಲಿನ್ | PTI
ಚೆನ್ನೈ: ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದಕ್ಕಾಗಿ ದಕ್ಷಿಣದ ರಾಜ್ಯಗಳನ್ನು ದಂಡಿಸುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ವಿರೋಧಿಸಲು ಎಲ್ಲಾ ‘‘ಸಂತ್ರಸ್ತ ರಾಜ್ಯಗಳನ್ನು’’ ಜೊತೆಗೆ ತರಲು ತಮಿಳುನಾಡು ಸರಕಾರ ರವಿವಾರ ನಿರ್ಧರಿಸಿದೆ.
ಕ್ಷೇತ್ರ ಪುನರ್ವಿಂಗಡಣೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಮ್ (ಡಿಎಮ್ಕೆ)ನ ಸಂಸದರ ಸಭೆಯು ಈ ನಿರ್ಣಯವನ್ನು ತೆಗೆದುಕೊಂಡಿದೆ.
ಕ್ಷೇತ್ರ ಪುನರ್ವಿಂಗಡಣೆಯ ವಿಷಯದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯುವುದಕ್ಕಾಗಿ ಇಂಡಿಯಾ ಮೈತ್ರಿಕೂಟ ಮತ್ತು ಇತರ ಪ್ರಜಾಸತ್ತಾತ್ಮಕ ಶಕ್ತಿಗಳೊಂದಿಗೆ ಜೊತೆಯಾಗಿ ಕೆಲಸ ಮಾಡಲು ಡಿಎಮ್ಕೆ ಸಂಸದರು ಒಪ್ಪಿದರು.
‘‘ಇಂದಿನ ಡಿಎಮ್ಕೆ ಸಂಸದರ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು: ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯವನ್ನು ಸಂರಕ್ಷಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವುದು, ಜನಸಂಖ್ಯೆಯನ್ನು ನಿಯಂತ್ರಣ ಮಾಡಿರುವುದಕ್ಕಾಗಿ ದಕ್ಷಿಣದ ರಾಜ್ಯಗಳನ್ನು ದಂಡಿಸಲು ನಡೆಸಲಾಗುತ್ತಿರುವ ಪ್ರಯತ್ನಗಳನ್ನು ವಿರೋಧಿಸಲು ಸಂತ್ರಸ್ತ ರಾಜ್ಯಗಳನ್ನು ಜೊತೆಗೆ ತರುವುದು ಹಾಗೂ ಕ್ಷೇತ್ರ ಪುನರ್ವಿಂಗಡಣೆಯ ವೇಳೆ ನಮ್ಮ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳೊಂದಿಗೆ ಜೊತೆಯಾಗಿ ಕೆಲಸ ಮಾಡುವುದು’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸ್ಟಾಲಿನ್ ಬರೆದಿದ್ದಾರೆ.
ಅದೇ ವೇಳೆ, ಹಿಂದಿ ಹೇರಿಕೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಲವಾಗಿ ವಿರೋಧಿಸುವ ನಿರ್ಣಯವನ್ನೂ ಸಂಸದರು ಅಂಗೀಕರಿಸಿದರು. ಹಾಗೂ ತಮಿಳುನಾಡಿಗೆ ಸಿಗಬೇಕಾಗಿರುವ ನ್ಯಾಯೋಚಿತ ಅನುದಾನಗಳನ್ನು ನೀಡಬೇಕು ಎಂಬುದಾಗಿಯೂ ಅವರು ಆಗ್ರಹಿಸಿದರು ಎಂದು ಸ್ಟಾಲಿನ್ ಹೇಳಿದ್ದಾರೆ.
ಲೋಕಸಭಾ ಕ್ಷೇತ್ರ ಮರುವಿಂಗಡಣೆಯು, ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ತಮಿಳುನಾಡಿನಂಥ ರಾಜ್ಯಗಳ ಪ್ರಭಾವವನ್ನು ಕುಂಠಿತಗೊಳಿಸುತ್ತದೆ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟರು.







