ʼಅನಾಗರಿಕ ತಮಿಳರುʼ ಹೇಳಿಕೆ : ಧರ್ಮೇಂದ್ರ ಪ್ರಧಾನ್ ವಿರುದ್ಧ ಹಕ್ಕು ಚ್ಯುತಿ ನೋಟಿಸ್ ಸಲ್ಲಿಸಿದ ಸಂಸದೆ ಕನಿಮೋಳಿ

ಧರ್ಮೇಂದ್ರ ಪ್ರಧಾನ್ / ಕನಿಮೋಳಿ (Photo: PTI)
ಹೊಸದಿಲ್ಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿರುವ ʼತಮಿಳರು ಅನಾಗರಿಕರುʼ ಎಂಬ ಹೇಳಿಕೆ ವಿರುದ್ಧ ಡಿಎಂಕೆ ಸಂಸದೆ ಕನಿಮೋಳಿ ಅವರು ಸಂಸತ್ತಿನಲ್ಲಿ ಹಕ್ಕು ಚ್ಯುತಿ ನೋಟಿಸ್ ಸಲ್ಲಿಸಿದ್ದು, ಸಚಿವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಮೇಲಿನ ರಾಜಕೀಯ ಜಟಾಪಟಿ ಮಧ್ಯೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತಮಿಳುನಾಡು ಸರಕಾರವನ್ನು ʼಅಪ್ರಾಮಾಣಿಕʼ ಮತ್ತು ರಾಜ್ಯದ ಜನರನ್ನು ʼಅನಾಗರಿಕರುʼ ಎಂದು ಕರೆದಿದ್ದಾರೆ. ಇದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಡಿಎಂಕೆ ನಡುವಿನ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧ್ರಮೇಂದ್ರ ಪ್ರಧಾನ್ ಅವರು ತಮಿಳುನಾಡು ಮತ್ತು ರಾಜ್ಯದ ಜನರನ್ನು ಅನಾಗರಿಕರು ಎಂದು ಕರೆದಿದ್ದು, ಈ ಅವಮಾನಕರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಡಿಎಂಕೆ ಮತ್ತು 8 ಕೋಟಿ ತಮಿಳರ ಪರವಾಗಿ ಸಚಿವರು ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ತಮಿಳುನಾಡು ಸರಕಾರ ಆರಂಭದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಂಡಿತು ಆದರೆ ನಂತರ ಯು-ಟರ್ನ್ ತೆಗೆದುಕೊಂಡಿತು ಎಂದು ಧರ್ಮೇಂದ್ರ ಪ್ರಧಾನ್ ತಪ್ಪಾಗಿ ಹೇಳಿದ್ದಾರೆ. ಸಚಿವರು ತಮಿಳುನಾಡು ಸಂಸದರ ಜೊತೆಗಿನ ಸಭೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದರು ಎಂದು ಹೇಳಿದರು.
ತಮಿಳುನಾಡು ಸರಕಾರ ಅಪ್ರಾಮಾಣಿಕ ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಮೊದಲು ಅನುಷ್ಠಾನ ಮಾಡಲಿದೆ ಎಂದು ಹೇಳಿತ್ತು. ಆದರೆ ಈಗ ಯು-ಟರ್ನ್ ಹೊಡೆದಿದೆ ಎಂದು ಧರ್ಮೇಂದ್ರ ಪ್ರಧಾನ್ ಈ ಹಿಂದೆ ಆರೋಪಿಸಿದ್ದರು.







