ಚೆನ್ನೈ | ವೈದ್ಯ, ಪತ್ನಿ ಹಾಗೂ ಇಬ್ಬರು ಪುತ್ರರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಡಾ. ಬಾಲಮುರುಗನ್ ಮತ್ತು ಪತ್ನಿ ಸುಮತಿ (Photo: NDTV)
ಚೆನ್ನೈ: ಗುರುವಾರ ಬೆಳಗ್ಗೆ ಪಶ್ಚಿಮ ಅಣ್ಣಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಓರ್ವ ವೈದ್ಯ, ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರು ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಣ್ಣಾನಗರದಲ್ಲಿ ಸ್ಕ್ಯಾನಿಂಗ್ ಕೇಂದ್ರವೊಂದನ್ನು ನಡೆಸುತ್ತಿದ್ದ ಮೃತ ವೈದ್ಯ, ಅದರಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ಡಾ. ಬಾಲಮುರುಗನ್, ಅವರ ಪತ್ನಿ ಸುಮತಿ ಹಾಗೂ ಪುತ್ರರಾದ ದಸ್ವಂತ್ (17) ಮತ್ತು ಲಿಂಗೇಶ್ (15) ಎಂದು ಗುರುತಿಸಲಾಗಿದೆ.
ಸುಮತಿ ಅವರು ನಗರ ನ್ಯಾಯಾಲಯವೊಂದರಲ್ಲಿ ವಕೀಲಿಕೆ ವೃತ್ತಿ ನಡೆಸುತ್ತಿದ್ದರೆ, ಅವರ ಪುತ್ರ ದಸ್ವಂತ್ 12 ತರಗತಿ ಪರೀಕ್ಷೆ ಬರೆಯುತ್ತಿದ್ದ ಹಾಗೂ ಕಿರಿಯ ಪುತ್ರ ಲಿಂಗೇಶ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಎಂದಿನಂತೆ ಅವರ ಚಾಲಕ ಮನೆಯ ಬಳಿಗೆ ತೆರಳಿದ್ದಾನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ, ಈ ಕುರಿತು ಆತ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾನೆ. ಆಗ ನೆರೆಹೊರೆಯವರು ಕಿಟಕಿಯಲ್ಲಿ ಇಣುಕಿ ನೋಡಿದಾಗ, ಅವರೆಲ್ಲ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಮುರುಗನ್ ಹಾಗೂ ಅವರ ಪತ್ನಿ ಒಂದು ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ಇಬ್ಬರು ಪುತ್ರರು ಮತ್ತೊಂದು ಕೋಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸರು, ಮೃತದೇಹಗಳನ್ನು ವಶಪಪಡಿಸಿಕೊಂಡು, ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪೌಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.