ವೈದ್ಯರು, ಇಂಜಿನಿಯರ್ಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಪ್ರವೃತ್ತಿಯಾಗಿದೆ : ಸುಪ್ರೀಂ ಕೋರ್ಟ್ಗೆ ತಿಳಿಸಿದ ದಿಲ್ಲಿ ಪೊಲೀಸರು

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ (Photo: PTI)
ಹೊಸದಿಲ್ಲಿ : 2020ರ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರಿಗೆ ಜಾಮೀನಿಗೆ ವಿರೋಧಿಸಿದ ದಿಲ್ಲಿ ಪೊಲೀಸರು, ವೈದ್ಯರು ಮತ್ತು ಇಂಜಿನಿಯರ್ಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ಈಗ ಒಂದು ಪ್ರವೃತ್ತಿಯಾಗಿದೆ ಎಂದು ಹೇಳಿದರು.
ದಿಲ್ಲಿ ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು, ವಿಚಾರಣೆಯ ವಿಳಂಬಕ್ಕೆ ಆರೋಪಿಗಳೇ ಕಾರಣ ಮತ್ತು ಅವರು ಅದರ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠಕ್ಕೆ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾರ್ಜೀಲ್ ಇಮಾಮ್ ಮಾಡಿದ್ದಾರೆನ್ನಲಾದ ಪ್ರಚೋದನಕಾರಿ ಭಾಷಣದ ವೀಡಿಯೊಗಳನ್ನು ರಾಜು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದರು.
ಶಾರ್ಜೀಲ್ ಇಮಾಮ್ ಇಂಜಿನಿಯರಿಂಗ್ ಪದವೀಧರ ಎಂಬುದನ್ನು ಉಲ್ಲೇಖಿಸಿ, "ಇತ್ತೀಚಿನ ದಿನಗಳಲ್ಲಿ ವೈದ್ಯರು, ಎಂಜಿನಿಯರ್ಗಳು ತಮ್ಮ ವೃತ್ತಿಯನ್ನು ಮಾಡದೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಇದೆ" ಎಂದು ಹೇಳಿದರು.
2020ರ ದಿಲ್ಲಿ ಗಲಭೆಗೆ ಪಿತೂರಿ ಆರೋಪದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್ ಮತ್ತಿತರರ ವಿರುದ್ಧ ಯುಎಪಿಎ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿತ್ತು.







