ಮಧ್ಯಪ್ರದೇಶ | ಜಿಲ್ಲಾಸ್ಪತ್ರೆಯಲ್ಲಿ ಯುವಕನ ಮೃತದೇಹವನ್ನು ಕಚ್ಚಿ ತಿಂದ ನಾಯಿ; ತನಿಖೆಗೆ ಆದೇಶ

Credit: iStock Photo
ನರ್ಮದಾಪುರಂ : ಮಧ್ಯಪ್ರದೇಶದ ನರ್ಮದಾಪುರಂನ ಸರಕಾರಿ ಆಸ್ಪತ್ರೆಯಲ್ಲಿ ಅಪಘಾತಕ್ಕೀಡಾದ ಯುವಕನ ಮೃತದೇಹವನ್ನು ನಾಯಿಯೊಂದು ಕಚ್ಚಿ ತಿಂದ ಘಟನೆ ರವಿವಾರ ನಡೆದಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಪಾಲನ್ಪುರ ಬಳಿ ಅಪಘಾತದಲ್ಲಿ ಮೃತಪಟ್ಟ ನಿಖಿಲ್ ಚೌರಾಸಿಯಾ(21) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿತ್ತು. ಈ ವೇಳೆ ನಿಖಿಲ್ ಮೃತದೇಹವನ್ನು ನಾಯಿ ಕಚ್ಚಿ ತಿಂದಿದೆ ಎಂದು ವರದಿಯಾಗಿದೆ.
ʼಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಲಾಗಿತ್ತು. ಈ ಕುರಿತು ತನಿಖೆ ನಡೆಸಲಾಗುವುದು. ಭದ್ರತಾ ಸಿಬ್ಬಂದಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಆಸ್ಪತ್ರೆಯ ಸರ್ಜನ್ ಸುಧೀರ್ ವಿಜಯವರ್ಗಿಯಾ ಹೇಳಿದರು.
ʼನೀರು ಕುಡಿಯಲು ಹೊರಗೆ ಹೋಗಿ ವಾಪಾಸ್ಸು ಬಂದು ನೋಡಿದಾಗ ನಾಯಿಯೊಂದು ಮೃತದೇಹದಿಂದ ಮಾಂಸದ ತುಂಡನ್ನು ಕಚ್ಚಿಕೊಂಡು ಓಡಿ ಹೋಗುವುದನ್ನು ನೋಡಿದೆʼ ಎಂದು ಮೃತ ವ್ಯಕ್ತಿಯ ಸೋದರ ಸಂಬಂಧಿ ಅಂಕಿತ್ ಗೋಹಿಲೆ ಆರೋಪಿಸಿದ್ದಾರೆ. ಇದಲ್ಲದೆ ನಿರ್ಲಕ್ಷ್ಯದ ಆರೋಪದಡಿ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





