ಡೊನಾಲ್ಡ್ ಟ್ರಂಪ್ GST ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದಾರೆ: ಕಾಂಗ್ರೆಸ್ ಟೀಕೆ

ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ: ಪರಸ್ಪರ ಸಮಾನ ತೆರಿಗೆ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮಾತುಗಳು ಜಿಎಸ್ಟಿಯಂತಹ ಬಳಕೆ ತೆರಿಗೆಯನ್ನು ಪ್ರಶ್ನಾರ್ಹವಾಗಿಸಿವೆ ಎಂದು ಬುಧವಾರ ಆರೋಪಿಸಿರುವ ಕಾಂಗ್ರೆಸ್, ದೇಶದ ಸಾರ್ವಭೌಮತೆ ಪಣಕ್ಕೀಡಾಗಿರುವಾಗ, ದಿಲ್ಲಿಯಲ್ಲಿನ ಒಳ್ಳೆಯ ಸ್ನೇಹಿತ ಈ ಕುರಿತು ಧ್ವನಿ ಎತ್ತುವರೆ? ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಈಗ ಅಧ್ಯಕ್ಷ ಟ್ರಂಪ್ ಜಿಎಸ್ಟಿ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದಾರೆ. ಅದು ತನ್ನ ಮೂಲ ರಚನೆಯಲ್ಲೇ ಆಮದುಗಳಿಗೆ ಅನ್ವಯವಾಗುತ್ತದೆಯೆ ಹೊರತು ರಫ್ತುಗಳಿಗಲ್ಲ. ಇದನ್ನು ಎಂದೂ ಪ್ರಶ್ನಿಸಲಾಗಿರಲಿಲ್ಲ” ಎಂದು ಹೇಳಿದ್ದಾರೆ.
ಆದರೀಗ, ಅಮೆರಿಕ ಅಧ್ಯಕ್ಷರು ಪರಸ್ಪರ ಸಮಾನ ತೆರಿಗೆಯ ಮಾತುಗಳನ್ನಾಡುತ್ತಿರುವುದರಿಂದ, ಜಿಎಸ್ಟಿಯಂತಹ ಬಳಕೆ ತೆರಿಗೆ ಪ್ರಶ್ನಾರ್ಹಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
“ವಿಶ್ವ ವ್ಯಾಪಾರ ಸಂಸ್ಥೆಯಲ್ಲದೆ, ದೇಶದ ಸಾರ್ವಭೌಮತೆಯೂ ಇಲ್ಲಿ ಪಣಕ್ಕೀಡಾಗಿದೆ. ತನ್ನನ್ನು ತಾನು ವಿಶ್ವಗುರು ಎಂದು ಡಂಗೂರ ಬಾರಿಸಿಕೊಳ್ಳುತ್ತಿರುವ ಅಧ್ಯಕ್ಷ ಟ್ರಂಪ್ ರ ಹೊಸ ದಿಲ್ಲಿ ಸ್ನೇಹಿತರು ಈ ಕುರಿತು ಧ್ವನಿ ಎತ್ತುವರೆ?” ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚಿನ ಸುತ್ತಿನಲ್ಲಿ ಅಮೆರಿಕ ಅಧ್ಯಟಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿರುವ ತೆರಿಗೆ ದರಗಳು ಶ್ವೇತ ಭವನ ಅನ್ಯಾಯಯುತ ತೆರಿಗೆ ಎಂದು ಬಣ್ಣಿಸಿರುವ, ನಿರ್ದಿಷ್ಟವಾಗಿ ಆಸ್ಟ್ರೇಲಿಯಾದ ಜಿಎಸ್ಟಿಯಂತಹ ಮೌಲ್ಯವರ್ಧಿತ ತೆರಿಗೆಗೆ ನೀಡಿರುವ ಪ್ರತಿಕ್ರಿಯೆಯನ್ನು ಒಳಗೊಂಡಿದೆ ಎಂದು ಪ್ರತಿಪಾದಿಸಿರುವ ಲೇಖನವನ್ನೂ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.







