ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಸ್ಥಳಗಳಿಗೆ ಹೋಗಬೇಡಿ: ಬಂಗಾಳಿಗಳಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕರೆ

ಸುವೇಂದು ಅಧಿಕಾರಿ (Photo: PTI)
ಹೊಸದಿಲ್ಲಿ: ಯಾವುದೇ ಬಂಗಾಳಿಗಳು ಕಾಶ್ಮೀರಕ್ಕೆ ಮತ್ತು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಸ್ಥಳಕ್ಕೆ ಹೋಗಬಾರದು ಎಂದು ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಶ್ಮೀರಕ್ಕೆ ಭೇಟಿ ನೀಡುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದರು.
ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಗುರುವಾರ ಕೋಲ್ಕತ್ತಾದಲ್ಲಿ ಮಮತಾ ಅವರನ್ನು ಭೇಟಿ ಮಾಡಿ ಜಮ್ಮುಕಾಶ್ಮೀರಕ್ಕೆ ಆಹ್ವಾನಿಸಿದ್ದರು. ಈ ಬಳಿಕ ಮಮತ ಬ್ಯಾನರ್ಜಿ, ಕಾಶ್ಮೀರಕ್ಕೆ ಭೇಟಿ ನೀಡುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದರು.
ʼಎಲ್ಲರೂ ಕಾಶ್ಮೀರಕ್ಕೆ ಹೋಗಬೇಕು. ದುರ್ಗಾ ಪೂಜೆಯ ನಂತರ ನಾನು ಕೂಡ ಕಾಶ್ಮೀರಕ್ಕೆ ಹೋಗುತ್ತೇನೆ. ಭಯಪಡುವ ಅಗತ್ಯವಿಲ್ಲ. ಕೇಂದ್ರ ಸರಕಾರ ಮತ್ತು ಉಮರ್ ಅಬ್ದುಲ್ಲಾ ಭದ್ರತೆ ಒದಗಿಸುತ್ತಾರೆ. ನಾನು ಕಾಶ್ಮೀರದ ಅಭಿಮಾನಿ. ಬಂಗಾಳಿ ಚಲನಚಿತ್ರೋದ್ಯಮ ಕಾಶ್ಮೀರವನ್ನು ಚಲನಚಿತ್ರ ಚಿತ್ರೀಕರಣಕ್ಕಾಗಿ ಪರಿಗಣಿಸಬೇಕು. ಕಾಶ್ಮೀರ ಕಲಾವಿದರು ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಬಂಗಾಳದ ಮುಖ್ಯಮಂತ್ರಿಯ ಮನವಿ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಸುವೇಂದು ಅಧಿಕಾರಿ, ಬಂಗಾಳಿಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರದೇಶಗಳಿಂದ ದೂರವಿರಬೇಕು. ಅದರ ಬದಲಿಗೆ ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡಕ್ಕೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಯಾವುದೇ ಬಂಗಾಳಿಗಳು ಕಾಶ್ಮೀರಕ್ಕೆ ಹೋಗಬಾರದು. ಎಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆಯೋ ಅಲ್ಲಿಗೆ ನಾವು ಹೋಗಬಾರದು. ಪಹಲ್ಗಾಮ್ ದಾಳಿಯಲ್ಲಿ ಕೋಲ್ಕತ್ತಾದ ಜನರನ್ನು ಹತ್ಯೆ ಮಾಡಲಾಯ್ತು. ನಮ್ಮ ಜನರನ್ನು ಅಲ್ಲಿ ಆಯ್ದು ಕೊಲೆ ಮಾಡಲಾಯಿತು. ಹಿಮಾಚಲಕ್ಕೆ ಹೋಗಿ, ಉತ್ತರಾಖಂಡಕ್ಕೆ ಹೋಗಿ, ಆದರೆ ಕಾಶ್ಮೀರಕ್ಕೆ ಹೋಗಬಾರದು ಎಂದು ಹೇಳಿದರು.







