ಯುವತಿಯರು ತುಂಡುಡುಗೆ ಧರಿಸುವುದನ್ನು ನಾನು ಇಷ್ಟಪಡುವುದಿಲ್ಲ: ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್ ವರ್ಗೀಯ

ಕೈಲಾಶ್ ವಿಜಯ್ ವರ್ಗೀಯ (PTI)
ಭೋಪಾಲ್: "ಯುವತಿಯರು ತುಂಡುಡುಗೆ ಧರಿಸುವುದನ್ನು ನಾನು ಇಷ್ಟಪಡುವುದಿಲ್ಲ" ಎಂಬ ಹೇಳಿಕೆ ನೀಡುವ ಮೂಲಕ, ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್ ವರ್ಗೀಯ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ.
ಇಂದೋರ್ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇಂದೋರ್ ನಗರದ ಮಾಜಿ ಮೇಯರ್ ಕೈಲಾಶ್ ವಿಜಯ್ ವರ್ಗೀಯ, "ಪಾಶ್ಚಿಮಾತ್ಯ ದೇಶಗಳಲ್ಲಿ ತುಂಡುಡುಗೆ (ಕಡಿಮೆ ಪ್ರಮಾಣದ ಉಡುಪು) ಧರಿಸಿದ ಯುವತಿಯರನ್ನು ಸೌಂದರ್ಯವತಿಯರು ಎಂದು ಪರಿಗಣಿಸಲಾಗುತ್ತದೆ. ಆದರೆ, ನಾನಿದನ್ನು ಒಪ್ಪುವುದಿಲ್ಲ. ಭಾರತದಲ್ಲಿ ಚೆನ್ನಾಗಿ ಉಡುಪು, ಆಭರಣಗಳನ್ನು ಧರಿಸಿ, ಆಕರ್ಷಕವಾಗಿ ಅಲಂಕಾರ ಮಾಡಿಕೊಂಡಿರುವ ಮಹಿಳೆಯರನ್ನು ಸೌಂದರ್ಯವತಿಯರು ಎಂದು ಪರಿಗಣಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಮಿತವಾದ ಮಾತು ಹಾಗೂ ಮಿತವಾದ ಉಡುಪಿನೊಂದಿಗೆ ಹೋಲಿಕೆ ಮಾಡಿದ ಅವರು, "ಪಾಶ್ಚಿಮಾತ್ಯ ದೇಶಗಳಲ್ಲಿ ಕಡಿಮೆ ಮಾತನಾಡುವ ಹಾಗೂ ಕಡಿಮೆ ಉಡುಪು ಧರಿಸುವ ಮಹಿಳೆಯರನ್ನು ಸೌಂದರ್ಯವತಿಯರು ಎಂದು ಪರಿಗಣಿಸಲಾಗುತ್ತದೆ. ಆದರೆ, ನಾನದನ್ನು ಒಪ್ಪುವುದಿಲ್ಲ. ಮಹಿಳೆಯು ದೇವತೆಯ ಸ್ವರೂಪವಿದ್ದಂತೆ ಎಂಬುದು ನನ್ನ ಭಾವನೆ. ಆಕೆ ಚೆನ್ನಾಗಿ ಉಡುಪುಗಳನ್ನು ಧರಿಸಬೇಕು. ತುಂಡುಡುಗೆ ಧರಿಸುವ ಮಹಿಳೆಯರು ನನಗೆ ಆಕರ್ಷಕವೆನಿಸುವುದಿಲ್ಲ" ಎಂದು ಹೇಳಿದರು.
"ಕೆಲವೊಮ್ಮೆ ಯುವತಿಯರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಆಗ ನಾನು, "ಮಗಳೆ, ಮುಂದಿನ ಬಾರಿ ಸರಿಯಾದ ಬಟ್ಟೆ ಧರಿಸಿ ಬಾ. ಆಗ ಪೋಟೊ ತೆಗೆದುಕೊಳ್ಳೋಣ" ಎಂದು ಅವರಿಗೆ ಕಿವಿಮಾತು ಹೇಳುತ್ತೇನೆ" ಎಂದು ಹೇಳಿದರು.
ಸಚಿವ ಕೈಲಾಶ್ ವಿಜಯ್ ವರ್ಗೀಯ ಈ ಮೊದಲು ಕೂಡ ಇದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು.
2022ರಲ್ಲಿ ಇಂದೋರ್ನಲ್ಲಿ ನಡೆದಿದ್ದ ಹನುಮಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ವರ್ಗೀಯ, ನಾನು ಹನುಮಾನ್ ಜಯಂತಿಯಂದು ಸುಳ್ಳು ಹೇಳುವುದಿಲ್ಲ. ಈಗಿನ ಕಾಲದ ಯುವತಿಯರು ಅಸಹ್ಯ ಉಡುಪುಗಳನ್ನು ಧರಿಸುತ್ತಾರೆ. ನಾವು ಅವರನ್ನು ದೇವತೆಯರು ಎಂದು ಕರೆಯುತ್ತೇವೆ. ಆದರೆ, ಅವರು ಹಾಗೆ ಕಾಣಿಸುವುದಿಲ್ಲ. ಅವರು ಶೂರ್ಪನಖಿಗಳಂತೆ ಕಾಣಿಸುತ್ತಾರೆ. ದೇವರು ನಿಮಗೆ ಸುಂದರವಾದ ದೇಹ ನೀಡಿದ್ದಾನೆ. ಕನಿಷ್ಠ ಪಕ್ಷ ಸಭ್ಯ ಉಡುಪುಗಳನ್ನಾದರೂ ಧರಿಸಿ. ನಿಮ್ಮ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿ" ಎಂದು ತಾಕೀತು ಮಾಡಿದ್ದರು.







