ಸುಪ್ರೀಂ ಕೋರ್ಟ್ ಅನ್ನು ‘ತಾರೀಖ್ ಪೆ ತಾರೀಖ್’ ನ್ಯಾಯಾಲಯವನ್ನಾಗಿ ಮಾಡಬೇಡಿ: ವಕೀಲರಿಗೆ ಮನವಿ ಮಾಡಿದ ಸಿಜೆಐ ಚಂದ್ರಚೂಡ್

ಚಂದ್ರಚೂಡ್ (Photo- PTI)
ಹೊಸದಿಲ್ಲಿ: ಪ್ರಕರಣಗಳ ವಿಚಾರಣೆಯನ್ನು ಮುಂದೂಡುವಂತೆ ಪದೇ ಪದೇ ಒತ್ತಾಯಿಸುವ ಮೂಲಕ ಸುಪ್ರೀಂ ಕೋರ್ಟನ್ನು ‘ತಾರೀಖ್ ಪೆ ತಾರೀಖ್’ (ಪದೇ ಪದೇ ಮುಂದೂಡಿಕೆಯ) ನ್ಯಾಯಾಲಯವನ್ನಾಗಿ ಮಾಡಬೇಡಿ ಎಂದು ಶುಕ್ರವಾರ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ವಕೀಲರಿಗೆ ಮನವಿ ಮಾಡಿದ್ದಾರೆ.
‘‘ನಿಜವಾಗಿಯೂ ಅಗತ್ಯವಿಲ್ಲದಿದ್ದರೆ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಬೇಡಿ ಎಂದು ನಾನು ವಕೀಲರನ್ನು ವಿನಿಂತಿಸುತ್ತೇನೆ. ಈ ನ್ಯಾಯಾಲಯವು ‘ತಾರೀಕ್ ಪೆ ತಾರೀಖ್’ ನ್ಯಾಯಾಲಯವಾಗುವುದನ್ನು ನಾನು ಬಯಸುವುದಿಲ್ಲ. ಅದು ಈ ನ್ಯಾಯಾಲಯದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಹಾಳುಗೆಡವುತ್ತದೆ’’ ಎಂದು ಅವರು ಹೇಳಿದರು.
ಶುಕ್ರವಾರದ ಒಂದೇ ದಿನಕ್ಕೆ 178 ಮುಂದೂಡಿಕೆ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
‘‘ತಾರೀಖ್-ಪೆ-ತಾರೀಖ್’’ ಸನ್ನಿ ಡಿಯೋಲ್ ನಟನೆಯ ಬಾಲಿವುಡ್ ಚಿತ್ರ ‘ದಾಮಿನಿ’ಯಲ್ಲಿನ ಒಂದು ಪ್ರಸಿದ್ಧ ಸಂಭಾಷಣೆಯಾಗಿದೆ. ಭಾರತೀಯ ನ್ಯಾಯಾಲಯಗಳಲ್ಲಿ ನೆಲೆಸಿರುವ ವಿಚಾರಣೆ ಮುಂದೂಡುವ ಪ್ರವೃತ್ತಿಯನ್ನು ಸನ್ನಿ ಡಿಯೋಲ್ರ ಪಾತ್ರ ಟೀಕಿಸುತ್ತದೆ.
ಪ್ರತಿ ದಿನ ಸರಾಸರಿ 154 ವಿಚಾರಣೆ ಮುಂದೂಡಿಕೆ ಮನವಿಗಳನ್ನು ಸಲ್ಲಿಸಲಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶರು ಹೇಳಿದರು.
ಪ್ರತಿ ದಿನ, ಸರಾಸರಿ 59 ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ ಹಾಗೂ ಈ ಪ್ರಕರಣಗಳ ವಿಚಾರಣೆಗಿಂತ ಮೂರು ಪಟ್ಟು ಹೆಚ್ಚು ಬಾರಿ ಅವುಗಳನ್ನು ಮುಂದೂಡಲಾಗುತ್ತದೆ ಎಂದು ಅವರು ನುಡಿದರು. ‘‘ಸೆಪ್ಟಂಬರ್ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ, 3,688 ಮುಂದೂಡಿಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಈ ಪ್ರಕರಣಗಳನ್ನು ಬೇಗ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದಾಗಿ ಅವುಗಳ ಸಲ್ಲಿಕೆ ವೇಳೆ ಕೋರಲಾಗಿತ್ತು’’ ಎಂದರು.







