ರಾಮನನ್ನು ರಾಜಕೀಯ ಅಸ್ತ್ರವಾಗಿ ಬಳಸಬೇಡಿ: ಅಧೀರ್ ರಂಜನ್ ಚೌಧುರಿ

ಅಧೀರ್ ರಂಜನ್ ಚೌಧರಿ | Photo: PTI
ಹೊಸದಿಲ್ಲಿ : ಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿ ಶ್ರೀರಾಮನನ್ನು ರಾಜಕೀಯ ಅಸ್ತ್ರವಾಗ ಬಳಸಬಾರದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಮವಾರ ತಿಳಿಸಿದ್ದಾರೆ.
ಚೀನಾ ಹಾಗೂ ಮಾಲ್ಡೀವ್ಸ್ ಕುರಿತು ಸರಕಾರದ ನೀತಿಯ ಬಗ್ಗೆ ಕೂಡ ಅವರು ಪ್ರಶ್ನಿಸಿದ್ದಾರೆ.
‘‘ಸಾರ್ವತ್ರಿಕ ಚುನಾವಣೆ ಬಾಗಿಲು ತಟ್ಟುತ್ತಿರುವಾಗ ನೀವು ಶ್ರೀರಾಮನ ಹಿಂದೆ ಆಶ್ರಯ ಪಡೆದುಕೊಳ್ಳುತ್ತಿದ್ದೀರಿ’’ ಎಂದು ಚೌಧುರಿ ಅವರು ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಾಯದ ಕುರಿತು ನಡೆದ ಚರ್ಚೆಯ ಸಂದರ್ಭ ಹೇಳಿದರು.
‘‘ನಾವೆಲ್ಲರೂ ಶ್ರೀರಾಮನನ್ನು ನಂಬುತ್ತೇವೆ. ರಾಮನನ್ನು ನಿಮ್ಮ ಪೇಟೆಂಟ್ ಮಾಡಿಕೊಳ್ಳಬೇಡಿ. ರಾಮನನ್ನು ಚುನಾವಣೆಯ ಅಸ್ತ್ರವಾಗಿ ಮಾಡಬೇಡಿ. ರಾಮ ಎಲ್ಲರ ದೇವರಾಗಿರಲಿ’’ ಎಂದು ಅವರು ಹೇಳಿದರು.
2014ರ ಸಾರ್ವತ್ರಿಕ ಚುನಾವಣೆ ಉಲ್ಲೇಖಿಸಿದ ಚೌಧುರಿ, ಬಿಜೆಪಿ ತನ್ನ ಸರಕಾರ ವಿದೇಶದಲ್ಲಿರುವ ಕಪ್ಪು ಹಣವನ್ನು ಹಿಂದೆ ತರುವುದರಿಂದ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು ಎಂದರು.
2019ರ ಚುನಾವಣೆ ಬಂದಾಗ, ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್)ಯ 40 ಸಿಬ್ಬಂದಿ ಮೃತಪಟ್ಟರು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿತು ಹಾಗೂ ಶಂಕಿತ ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸಿತು ಎಂದು ಅವರು ತಿಳಿಸಿದರು.
ಬಾಲಕೋಟ್ನಲ್ಲಿ ನಡೆದ ವೈಮಾನಿಕ ದಾಳಿ ಕುರಿತ ಸತ್ಯವನ್ನು ಸರಕಾರ ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಬಾಲಕೋಟ್ ನಲ್ಲಿರುವ ಯಾವುದೇ ಪ್ರಮುಖ ಗುರಿ ಮೇಲೆ ದಾಳಿ ನಡೆಸಿಲ್ಲ ಎಂದು ಹಲವು ಸ್ವತಂತ್ರ ಸಂಸ್ಥೆಗಳು ಪ್ರತಿಪಾದಿಸಿವೆ ಎಂದು ಅವರು ಹೇಳಿದರು.
ಅಧ್ಯಕ್ಷೀಯ ಭಾಷಣ ಭಾರತ-ಚೀನಾ ಗಡಿಯ ಯಾವುದೇ ಭದ್ರತಾ ಕಳವಳನ್ನು ಉಲ್ಲೇಖಿಸಿಲ್ಲ ಎಂದು ಗಮನ ಸೆಳೆದ ಚೌಧುರಿ, ಲಡಾಖ್ ನಲ್ಲಿ ಪರಿಸ್ಥಿತಿ ಪ್ರತಿ ದಿನ ಹದಗೆಡುತ್ತಿದೆ. ಈಗ ಸುಮಾರು 2,000 ಚದರ ಕಿ.ಮೀ. ಪ್ರದೇಶ ಚೀನಾದ ನಿಯಂತ್ರಣದಲ್ಲಿದೆ ಎಂದರು.







