ವರದಕ್ಷಿಣೆ ಕಿರುಕುಳ, ಗೃಹ ಹಿಂಸೆ ಆರೋಪ; ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ
ನೊಯ್ಡಾ,ಅ.18: ಪತ್ನಿಯು ವರದಕ್ಷಿಣೆ ಕಿರುಕುಳ ಸೇರಿದಂತೆ ಗಂಭೀರವಾದ ಆರೋಪಗಳನ್ನು ಹೊರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಉತ್ತರಪ್ರದೇಶದ ನೊಯ್ಡಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2019ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಶಿವಾಂಶು ರಜಪೂತ್ ವಿರುದ್ಧ ಅವರ ಪತ್ನಿ ಡಾ. ಕೃತಿ ಸಿಂಗ್ ನೊಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಶಿವಾಂಶು ರಜಪೂತ್ ಹಾಗೂ ಅವರ ಕುಟುಂಬದ ಹಲವಾರು ಸದಸ್ಯರು ತನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಗೃಹಿಕ ಹಿಂಸೆ ನೀಡಿದ್ದಾರೆಂದು ಕೃತಿ ಆಪಾದಿಸಿದ್ದಾರೆ. ಐಪಿಎಸ್ ಅಧಿಕಾರಿ ಜೊತೆಗೆ ಅವರ ತಾಯಿ,ತಂದೆ,ಭಾವ, ನಾದಿನಿ ಹಾಗೂ ಅವರ ಸ್ನೇಹಿತರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಕೃತಿ ದೂರಿನಲ್ಲಿ ಹೆಸರಿಸಿದ್ದಾರೆ.
ತಾವು ಪ್ರೇಮವಿವಾಹವಾಗಿದ್ದ ಹೊರತಾಗಿಯೂ, ತಾನು ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾಗಿ ಡಾ.ಸಿಂಗ್ ಆಪಾದಿಸಿದ್ದಾರೆ. ಪಂಚತಾರಾ ಹೊಟೇಲೊಂದರಲ್ಲಿ ನಡೆದ ತಮ್ಮ ವಿವಾಹಕ್ಕೆ ಎರಡು ಕೋಟಿ ರೂ. ವೆಚ್ಚವಾಗಿತ್ತು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ರಜಪೂತ್ ಅವರು ಹಲವಾರು ಮಹಿಳೆಯರ ಜೊತೆ ಅನೈತಿಕ ಸಂಬಂಧವನ್ನು ಇರಿಸಿಕೊಂಡಿದ್ದಾರೆಂದು ಡಾ.ಕೃತಿ ಅವರು ಎಫ್ಐಆರ್ನಲ್ಲಿ ದೂರಿದ್ದಾರೆ.
ನೊಯ್ಡಾ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.







