ಮಾಸ್ಟರ್ ಶೆಫ್ ಇಂಡಿಯಾ ಸೀಸನ್ 8: ಕಾಶ್ಮೀರದ ಆಹಾರ ತಂತ್ರಜ್ಞೆ ಡಾ. ರುಖ್ಸಾರ್ ಸಯೀದ್ ಎರಡನೇ ರನ್ನರ್-ಅಪ್
ಎಲ್ಲರ ಮನಗೆದ್ದ ಅವರ ವಿಶಿಷ್ಟ “ಬ್ರದರ್ಹುಡ್ ಪ್ಲ್ಯಾಟರ್”

ಡಾ. ರುಖ್ಸಾರ್ ಸಯೀದ್ (Photo credit: kimskashmir.com)
ಶ್ರೀನಗರ: ಕಾಶ್ಮೀರದ ಆಹಾರ ತಂತ್ರಜ್ಞೆ ಡಾ. ರುಖ್ಸಾರ್ ಸಯೀದ್ ಅವರು ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಡಾ. ರುಖ್ಸಾರ್ ಅವರು ಭಾರತದ ಅತಿದೊಡ್ಡ ಆಹಾರ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಕಾಶ್ಮೀರದ ಮೊದಲ ಸ್ಪರ್ಧಿಯಾಗಿದ್ದರು. ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಶುಕ್ರವಾರ ಪ್ರಸಾರವಾಗಿದ್ದು, ಇದರಲ್ಲಿ ಮಂಗಳೂರಿನ ಮಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ ಸೀಸನ್ 8 ರ ವಿಜೇತರು ಎಂದು ಘೋಷಿಸಲಾಯಿತು.
ಡಾ. ರುಖ್ಸಾರ್ ಅವರನ್ನು ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಯಿತು. ಮೂರನೇ ಸ್ಥಾನವನ್ನು ಗಳಿಸಿದ್ದಕ್ಕಾಗಿ ಅವರು 5 ಲಕ್ಷ ರೂಪಾಯಿಗಳನ್ನು ಗೆದ್ದಿದ್ದಾರೆ. ಸ್ಪರ್ಧೆಯ ಅಂತಿಮ ಹಂತಕ್ಕೆ ನಂಬಿ ಮರಕ್, ಮುಹಮ್ಮದ್ ಆಶಿಕ್, ಡಾ. ರುಖ್ಸಾರ್ ಸಯೀದ್ ಮತ್ತು ಸೂರಜ್ ಥಾಪಾ ಆಯ್ಕೆಯಾಗಿದ್ದು, ರುಖ್ಸಾರ್ ಅವರು ಕಾಶ್ಮೀರಿ ಪಾಕ ಪದ್ಧತಿಯನ್ನು ದೊಡ್ಡ ವೇದಿಕೆ ಮೇಲೆ ಪ್ರದರ್ಶಿಸಿದ್ದರು.
ಜೂನ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಆಡಿಷನ್ ಪ್ರಕ್ರಿಯೆಯ ಉದ್ದಕ್ಕೂ ರುಖ್ಸಾರ್ ಅವರು ಹಲವಾರು ಸವಾಲುಗಳು ಮತ್ತು ಪರೀಕ್ಷೆಗಳನ್ನು ತಮ್ಮ ಅಪರಿಮಿತ ಮನೋಬಲ ಮತ್ತು ವಿಶ್ವಾಸದೊಂದಿಗೆ ಯಶಸ್ವಿಯಾಗಿ ಎದುರಿಸಿದ್ದರಲ್ಲದೆ ತಮ್ಮ ಪಾಕಪ್ರವೀಣತೆಯನ್ನು ಪ್ರದರ್ಶಿಸಿ ಎಲ್ಲರ ಮನಗೆದ್ದಿದ್ದರು.
ಸ್ಪರ್ಧೆಯ ಅಂತಿಮ ಭಾಗದಲ್ಲಿ ರುಖ್ಸಾರ್ ಅವರು ಸೌಹಾರ್ದತೆಯ ಸಂಕೇತವಾದ “ಬ್ರದರ್ಹುಡ್ ಪ್ಲ್ಯಾಟರ್” ಸಿದ್ಧಪಡಿಸಿದ್ದರು. ಇದು ಮುಸ್ಲಿಂ ಮತ್ತು ಕಾಶ್ಮೀರಿ ಪಂಡಿತ್ ಸಂಪ್ರದಾಯಗಳ ಅದ್ಭುತ ರುಚಿಗಳ ಅನನ್ಯ ಸಂಗಮವಾಗಿತ್ತು. ಈ ವಿಶೇಷ ಖಾದ್ಯದ ಭಾಗವಾಗಿ ಅವರು ರೋಗನ್ ಜೋಶ್, ದಮ್ ಆಲೂ ಮತ್ತು ಬಟಾ ಹಾಖ್ ಒಳಗೊಂಡಂತೆ ವಾಝ್ವಾನ್ ಖಾದ್ಯಗಳನ್ನು ಸಿದ್ಧಫಡಿಸಿ ಪ್ರದರ್ಶಿಸಿ ತಮ್ಮ ಪ್ರಾಂತ್ಯದ ಸಮೃದ್ಧ ಆಹಾರ ಪರಂಪರೆ ಹೇಗೆ ವಿವಿಧ ಸಮುದಾಯಗಳನ್ನು ಒಗ್ಗೂಡಿಸುತ್ತದೆ ಎಂಬುದನ್ನು ಬಿಂಬಿಸಿದ್ದರು.
ತಮ್ಮ ಸ್ವಾದಿಷ್ಟತೆಗೆ ಹೆಸರು ಮಾಡಿರುವ ಕಾಶ್ಮೀರಿ ಖಾದ್ಯಗಳನ್ನು ಜಗತ್ತಿಗೆ ಪರಿಚಯಿಸುವ ಗುರಿ ತಮ್ಮದು ಎಂದು ಹೇಳಿಕೊಳ್ಳುವ ರುಖ್ಸಾರ್, ತಾವು ಈ “ಕಳೆದುಹೋದ ಕಾಶ್ಮೀರಿ ಖಾದ್ಯ”ವನ್ನು ತಮ್ಮ ತಾಯಿಯಿಂದ ಕಲಿತಿರುವುದಾಗಿ ಹೇಳುತ್ತಾರೆ. ಅವರ ತಾಯಿ ಈ ಖಾದ್ಯ ತಯಾರಿಸುವ ವಿಧಾನವನ್ನು ತಮ್ಮ ತಾಯಿ (ರುಖ್ಸಾರ್ ಅವರ ಅಜ್ಜಿ)ಯಿಂದ ಕಲಿತಿದ್ದರು.
ಪ್ಯಾಂಪೋರ್ ಮೂಲದ ಡಾ ರುಖ್ಸಾರ್ ಸಯೀದ್ ಅವರು ಕಾಶ್ಮೀರ ಕಣಿವೆಯ ಮೊದಲ “ಫ್ರೋಝನ್ ಫೂಡ್” ಮಳಿಗೆಯನ್ನೂ ಹೊಂದಿದ್ದಾರೆ.







