ಸರಕಾರವು ಸಂಪೂರ್ಣ ಸಂವೇದನೆಯೊಂದಿಗೆ ಎಲ್ಲರಿಗಾಗಿ ಕೆಲಸ ಮಾಡುತ್ತಿದೆ: ರಾಷ್ಟ್ರಪತಿ

ದ್ರೌಪದಿ ಮರ್ಮು | Photo Credit : PTI
ಹೊಸದಿಲ್ಲಿ, ಜ.28: ರಾಷ್ಟ್ರಪತಿ ದ್ರೌಪದಿ ಮರ್ಮು ಅವರು, ಸರಕಾರವು ದಲಿತರು, ಹಿಂದುಳಿದ ವರ್ಗಗಳು, ಶೋಷಿತರು ಮತ್ತು ಬುಡಕಟ್ಟು ಸಮುದಾಯಗಳು ಸೇರಿದಂತೆ ಎಲ್ಲರಿಗಾಗಿ ಸಂವೇದನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿಯಮಾವಳಿಗಳ ಕುರಿತು ವಿವಿಧ ವಲಯಗಳಲ್ಲಿ ವ್ಯಕ್ತವಾಗಿರುವ ಅಸಮಾಧಾನದ ನಡುವೆಯೇ ರಾಷ್ಟ್ರಪತಿಗಳ ಈ ಹೇಳಿಕೆ ಹೊರಬಿದ್ದಿದೆ.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನವಾದ ಬುಧವಾರ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮರ್ಮು, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ದೃಷ್ಟಿಕೋನವು ಎಲ್ಲ ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದೆ ಎಂದು ಹೇಳಿದರು.
‘2014ರ ಆರಂಭದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳು ಕೇವಲ 25 ಕೋಟಿ ನಾಗರಿಕರನ್ನು ತಲುಪಿದ್ದವು. ನನ್ನ ಸರಕಾರದ ನಿರಂತರ ಪ್ರಯತ್ನಗಳಿಂದಾಗಿ ಇಂದು ಸುಮಾರು 95 ಕೋಟಿ ಭಾರತೀಯರು ಸಾಮಾಜಿಕ ಭದ್ರತೆ ವ್ಯಾಪ್ತಿಯಲ್ಲಿದ್ದಾರೆ’ ಎಂದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸದಾ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಹತ್ವ ನೀಡಿದ್ದರು ಎಂದು ಹೇಳಿದ ರಾಷ್ಟ್ರಪತಿಗಳು, ‘ನಮ್ಮ ಸಂವಿಧಾನವು ಅದೇ ಆಶಯದೊಂದಿಗೆ ನಮಗೆ ಸ್ಫೂರ್ತಿಯನ್ನು ನೀಡುತ್ತಿದೆ’ ಎಂದರು. ಸಾಮಾಜಿಕ ನ್ಯಾಯ ಎಂದರೆ ಪ್ರತಿಯೊಬ್ಬ ನಾಗರಿಕನೂ ಯಾವುದೇ ಭೇದಭಾವವಿಲ್ಲದೆ ತನ್ನ ಸಂಪೂರ್ಣ ಹಕ್ಕುಗಳನ್ನು ಅನುಭವಿಸುವುದಾಗಿದೆ ಎಂದು ಅವರು ಒತ್ತಿ ಹೇಳಿದರು.
ಸರಕಾರವು ಸಾಮಾಜಿಕ ನ್ಯಾಯದ ನಿಜವಾದ ಅರ್ಥದಲ್ಲಿ ಅದಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಇದರ ಪರಿಣಾಮವಾಗಿ ಕಳೆದೊಂದು ದಶಕದಲ್ಲಿ 25 ಕೋಟಿ ನಾಗರಿಕರು ಬಡತನದಿಂದ ಹೊರಬಂದಿದ್ದಾರೆ ಎಂದರು.
‘ನನ್ನ ಸರಕಾರದ ಮೂರನೇ ಅಧಿಕಾರಾವಧಿಯಲ್ಲಿ ಬಡವರ ಸಬಲೀಕರಣದ ಅಭಿಯಾನವು ಇನ್ನಷ್ಟು ವೇಗದೊಂದಿಗೆ ಮುನ್ನಡೆದಿದೆ’ ಎಂದ ಮರ್ಮು, ಕಳೆದೊಂದು ದಶಕದಲ್ಲಿ ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಕಳೆದೊಂದು ವರ್ಷದಲ್ಲಿಯೇ 32 ಲಕ್ಷ ಹೊಸ ಮನೆಗಳನ್ನು ಬಡವರಿಗೆ ನೀಡಲಾಗಿದೆ. ಜಲಜೀವನ್ ಮಿಷನ್ನ ಐದು ವರ್ಷಗಳ ಅವಧಿಯಲ್ಲಿ 12.5 ಕೋಟಿ ಹೊಸ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಕಳೆದ ವರ್ಷ ಸುಮಾರು ಒಂದು ಕೋಟಿ ಹೊಸ ಮನೆಗಳು ನಲ್ಲಿ ನೀರಿನ ಸಂಪರ್ಕವನ್ನು ಪಡೆದುಕೊಂಡಿವೆ ಎಂದರು.
ಉಜ್ವಲಾ ಯೋಜನೆಯಡಿ ಈವರೆಗೆ 10 ಕೋಟಿಗೂ ಅಧಿಕ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗಿದೆ. ಕಳೆದ ವರ್ಷದಲ್ಲಿ ಈ ಅಭಿಯಾನವು ತ್ವರಿತ ಗತಿಯಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು.
‘ನನ್ನ ಸರಕಾರವು ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಸಾಂಸ್ಥಿಕಗೊಳಿಸುತ್ತಿದೆ. ಕಳೆದೊಂದು ವರ್ಷದಲ್ಲಿ ನನ್ನ ಸರಕಾರವು ನೇರ ಲಾಭ ವರ್ಗಾವಣೆಯ ಮೂಲಕ ಫಲಾನುಭವಿಗಳಿಗೆ 6.75 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಪ್ರಯೋಜನಗಳನ್ನು ನೇರವಾಗಿ ಒದಗಿಸಿದೆ’ ಎಂದು ಮರ್ಮು ಹೇಳಿದರು.
ತನ್ನ ಸರಕಾರವು ತ್ವರಿತ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದು, ಅದರ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರಿಗೆ ಪ್ರಯೋಜನಗಳನ್ನು ಒದಗಿಸುತ್ತಿದೆ. ಕಳೆದ ವರ್ಷ ಜಾರಿಗೊಳಿಸಲಾದ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಯಿಂದ ನಾಗರಿಕರಿಗೆ ಒಂದು ಲಕ್ಷ ಕೋಟಿ ರೂ.ಗಳ ಉಳಿತಾಯವಾಗಿದೆ. 2025ರಲ್ಲಿ ಜಿಎಸ್ಟಿ ಕಡಿತದ ಬಳಿಕ ದ್ವಿಚಕ್ರ ವಾಹನಗಳ ನೋಂದಣಿ ಎರಡು ಕೋಟಿಯನ್ನು ದಾಟಿದ್ದು, ಇದೇ ಒಂದು ಹೊಸ ದಾಖಲೆಯಾಗಿದೆ ಎಂದು ಹೇಳಿದ ರಾಷ್ಟ್ರಪತಿಗಳು, ಸರಕಾರವು ಆದಾಯ ತೆರಿಗೆ ಕಾಯ್ದೆಯನ್ನು ಪರಿಷ್ಕರಿಸಿದ್ದು, 12 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.
ಈ ಸುಧಾರಣೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಭೂತಪೂರ್ವ ಪ್ರಯೋಜನಗಳನ್ನು ಒದಗಿಸುತ್ತಿವೆ. ಅವು ದೇಶದ ಆರ್ಥಿಕತೆಗೆ ಹೊಸ ಉತ್ತೇಜನವನ್ನೂ ನೀಡಿವೆ ಎಂದರು.
‘ಇಂದು ನನ್ನ ಸರಕಾರವು ತ್ವರಿತ ಸುಧಾರಣೆಗಳ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಹಳೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ನವೀಕರಿಸಲಾಗುತ್ತಿದೆ’ ಎಂದು ಮರ್ಮು ಹೇಳಿದರು.







