ರಾಷ್ಟ್ರೀಯತಾವಾದಿ ಚಿಂತನೆ ಅಳವಡಿಸಿಕೊಳ್ಳಲು ಸಂವಿಧಾನ ಮಾರ್ಗದರ್ಶಿ ದಾಖಲೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ದ್ರೌಪದಿ ಮುರ್ಮು | Photo Credit : PTI
ಹೊಸದಿಲ್ಲಿ,ನ.26: ಸಂವಿಧಾನವು ದೇಶದ ಅನನ್ಯತೆಯ ಅಡಿಪಾಯವಾಗಿದೆ. ಜೊತೆಗೆ ವಸಾಹತು ಮನಃಸ್ಥಿತಿಯನ್ನು ತೊರೆದು ರಾಷ್ಟ್ರೀಯತಾವಾದಿ ಚಿಂತನೆಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶಿ ದಾಖಲೆಯೂ ಆಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಪ್ರತಿಪಾದಿಸಿದರು.
ಈಗ ‘ಸಂವಿಧಾನ ಸದನ’ ಎಂದು ಕರೆಯಲಾಗುತ್ತಿರುವ ಹಳೆಯ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್ ನಲ್ಲಿ ಸಂವಿಧಾನ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುರ್ಮು,ಭಾರತವು ಜಗತ್ತಿಗೆ ಅಭಿವೃದ್ಧಿಯ ಹೊಸ ಮಾದರಿಯನ್ನು ಪ್ರಸ್ತುತ ಪಡಿಸುತ್ತಿದೆ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
‘ನಮ್ಮ ಸಂವಿಧಾನವು ರಾಷ್ಟ್ರೀಯ ಹೆಮ್ಮೆಯ ದಾಖಲೆಯಾಗಿದೆ. ಅದು ರಾಷ್ಟ್ರದ ಗುರುತಿನ ದಾಖಲೆಯಾಗಿದೆ. ಅದು ವಸಾಹತುಶಾಹಿ ಮನಃಸ್ಥಿತಿಯನ್ನು ತೊರೆದು ರಾಷ್ಟ್ರೀಯತಾವಾದಿ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ಮತ್ತು ದೇಶವನ್ನು ಮುಂದಕ್ಕೊಯ್ಯಲು ಮಾರ್ಗದರ್ಶಿ ದಾಖಲೆಯಾಗಿದೆ ’ಎಂದು ಹೇಳಿದ ರಾಷ್ಟ್ರಪತಿಗಳು, ಈ ದೃಷ್ಟಿಕೋನದೊಂದಿಗೆ ರಾಷ್ಟ್ರವು ಭಾರತೀಯ ನ್ಯಾಯ ಸಂಹಿತಾ,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಹೀಗೆ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದರು.
ವೈಯಕ್ತಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಯಾವಾಗಲೂ ರಕ್ಷಿಸಬೇಕು ಎಂದು ದೇಶದ ಸಂವಿಧಾನ ನಿರ್ಮಾತೃರು ಬಯಸಿದ್ದರು ಎಂದು ಮುರ್ಮು ಹೇಳಿದರು.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿ ರದ್ದತಿಯನ್ನು ಉಲ್ಲೇಖಿಸಿದ ಅವರು, ಅದನ್ನು ಅಂತ್ಯಗೊಳಿಸುವ ಮೂಲಕ ರಾಷ್ಟ್ರವು ರಾಜಕೀಯ ಅಡಚಣೆಯಿಂದ ಮುಕ್ತಗೊಂಡಿದೆ ಎಂದು ಹೇಳಿದರು.
‘ಕಳೆದೊಂದು ದಶಕದಲ್ಲಿ ನಮ್ಮ ಸಂಸತ್ತು ಜನತೆಯ ಆಶೋತ್ತರಗಳನ್ನು ಈಡೇರಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ’ ಎಂದರು.
ತ್ರಿವಳಿ ತಲಾಖ್ಗೆ ನಿಷೇಧ ಮತ್ತು ಜಿಎಸ್ಟಿ ಜಾರಿಯನ್ನೂ ಉಲ್ಲೇಖಿಸಿದ ರಾಷ್ಟ್ರಪತಿಗಳು,ಇವು ಮಹಿಳೆಯರಿಗಾಗಿ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅನುಕ್ರಮವಾಗಿ ಎರಡು ಅತ್ಯಂತ ಮಹತ್ವದ ಕ್ರಮಗಳಾಗಿವೆ ಎಂದು ತಿಳಿಸಿದರು.
ನಮ್ಮ ರಾಷ್ಟ್ರವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಭರದಿಂದ ಮುನ್ನಡೆಯುತ್ತಿದೆ ಎಂದೂ ಅವರು ಹೇಳಿದರು.
ಇದೇ ವೇಳೆ ರಾಷ್ಟ್ರಪತಿಗಳು ಮಲಯಾಳಂ,ಮರಾಠಿ,ನೇಪಾಳಿ, ಪಂಜಾಬಿ, ಬೋಡೊ,ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.







