ರಾಜಸ್ಥಾನ | ಪಾಕಿಸ್ತಾನದ ಪರ ಬೇಹುಗಾರಿಕೆ : ಡಿಆರ್ಡಿಒ ಅತಿಥಿ ಗೃಹದ ವ್ಯವಸ್ಥಾಪಕ ಮಹೇಂದ್ರ ಪ್ರಸಾದ್ ಬಂಧನ

Photo | ANI
ಜೈಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮತ್ತು ಭಾರತದ ರಕ್ಷಣಾ ಚಟುವಟಿಕೆಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಡಿಆರ್ಡಿಒ ಅತಿಥಿ ಗೃಹದ ವ್ಯವಸ್ಥಾಪಕನನ್ನು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಿಐಡಿ ಪೊಲೀಸರ ತಂಡ ಬಂಧಿಸಿದೆ.
ಉತ್ತರಾಖಂಡದ ಅಲ್ಮೋರಾದ ಪಲ್ಯುನ್ ನಿವಾಸಿ ಮಹೇಂದ್ರ ಪ್ರಸಾದ್ (32) ಬಂಧಿತ ಆರೋಪಿ. ಈತ ಚಂದನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಅತಿಥಿ ಗೃಹದ ವ್ಯವಸ್ಥಾಪಕನಾಗಿದ್ದನು.
ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಭಾರತದ ರಕ್ಷಣಾ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಪ್ರಸಾದ್ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು, ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರ ಪರೀಕ್ಷೆಗಾಗಿ ಬರುವ ಡಿಆರ್ಡಿಒ ವಿಜ್ಞಾನಿಗಳು ಮತ್ತು ಭಾರತೀಯ ಸೇನಾ ಅಧಿಕಾರಿಗಳ ಚಲನವಲನಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜಸ್ಥಾನ ಪೊಲೀಸರು ರಾಷ್ಟ್ರವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳ ಮೇಲೆ ಹೆಚ್ಚಿನ ಕಣ್ಗಾವಲಿಟ್ಟಿದ್ದಾರೆ ಎಂದು ಸಿಐಡಿ ಐಜಿ ಡಾ. ವಿಷ್ಣುಕಾಂತ್ ಹೇಳಿದ್ದಾರೆ.







