ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಅಪಹರಿಸಿ ಉತ್ತರ ಪ್ರದೇಶದಕ್ಕೆ ಕರೆದೊಯ್ದು ಥಳಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಮೀರತ್/ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಮುಕ್ತ ಕಲಿಕೆ ಕೇಂದ್ರದ ಎರಡನೆ ಬಿ.ಎ. ವಿದ್ಯಾರ್ಥಿಯೊಬ್ಬನನ್ನು ಆತನ ಮನೆಯ ಬಳಿಯಿಂದ ಅಪಹರಿಸಿರುವ ದುಷ್ಕರ್ಮಿಗಳು, ಆತನನ್ನು ಉತ್ತರ ಪ್ರದೇಶದ ಬಾಘ್ಪಟ್ಗೆ ಕರೆದೊಯ್ದು ಥಳಿಸಿ ಹತ್ಯೆಗೈದಿರುವ ಘಟನೆ ಶನಿವಾರ ನಡೆದಿದೆ ಎಂದು ತಡವಾಗಿ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಹಿಮಾಂಶು ಶರ್ಮ ಎಂದು ಗುರುತಿಸಲಾಗಿದ್ದು, ಆತ ತಮ್ಮ 19 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆತನನ್ನು ಹತ್ಯೆಗೈದ ಆರೋಪಕ್ಕೆ ಗುರಿಯಾಗಿರುವ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮೃತ ವಿದ್ಯಾರ್ಥಿಯ ತಾಯಿ ನಿರಾಕರಿಸಿದ್ದಾರೆ.
ಈ ಸಂಬಂಧ ಏಳು ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹಿಮಾಂಶು ಶರ್ಮನನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಕುಟುಂಬದ ಸದಸ್ಯರು ಆತ ತಮ್ಮ ಪುತ್ರಿಯನ್ನು ಅತ್ಯಾಚಾರವೆಸಗಿ, ಆಕೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದರೆ, ಈ ಆರೋಪವನ್ನು ಅಲ್ಲಗಳೆದಿರುವ ಹಿಮಾಂಶು ಶರ್ಮನ ತಾಯಿ, ಈ ಘಟನೆಗೆ ಯಾವುದೇ ಮಹಿಳೆಯ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಇದೊಂದು ಮರ್ಯಾದಾ ಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.







