ಎರಡು ಟೋಲ್, ಒಬ್ಬನೇ ಡೆವಲಪರ್: ಕೇಂದ್ರ ಸರಕಾರದಿಂದ ಹೊಸ ಹೆದ್ದಾರಿ ಯೋಜನೆ

Image Source : PTI
ಹೊಸದಿಲ್ಲಿ: ಖಾಸಗಿ ಹೂಡಿಕೆ ಆಕರ್ಷಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಹೆದ್ದಾರಿ ಯೋಜನೆಗಳಿಗೆ ಎರಡು ಟೋಲ್, ಒಬ್ಬನೇ ಡೆವಲಪರ್ ಮಾದರಿಯನ್ನು ಪರಿಚಯಿಸಿದೆ. ಹೊಸ ಹೆದ್ದಾರಿ ಯೋಜನೆಗೆ ಆಯ್ಕೆಯಾದ ಡೆವಲಪರ್ಗಳಿಗೆ ಹಳೆಯ ಸಮಾನಾಂತರ ರಸ್ತೆಗಳನ್ನು ನಿರ್ವಹಿಸುವ ಮತ್ತು ಟೋಲ್ ಸಂಗ್ರಹಿಸುವ ಹಕ್ಕನ್ನು ನೀಡುವ ಈ ಕ್ರಮ, ಟೋಲ್ ಸೋರಿಕೆ ತಡೆಯುವುದಲ್ಲದೆ BOT ಮಾದರಿಯ ಹೂಡಿಕೆಗೆ ಪ್ರೇರಣೆಯಾಗಲಿದೆ.
NHAI ಮತ್ತು ಸಂಬಂಧಿತ ಸಂಸ್ಥೆಗಳಿಗೆ, ಹೊಸ ಹೆದ್ದಾರಿ ಯೋಜನೆಗಳಿಗೆ ಹತ್ತಿರದ ಹಳೆಯ ರಸ್ತೆಗಳನ್ನು ಗುರುತಿಸುವಂತೆ ಸೂಚನೆ ನೀಡಲಾಗಿದೆ. ಇದರಿಂದ ಹಳೆಯ ಮತ್ತು ಹೊಸ ರಸ್ತೆಗಳನ್ನು ಒಂದೇ ಪ್ಯಾಕೇಜ್ ನಲ್ಲಿ ಬಿಡ್ಡರ್ ಗಳಿಗೆ ಒದಗಿಸುವ ವ್ಯವಸ್ಥೆ ರೂಪಗೊಳ್ಳುತ್ತಿದೆ.
ಪ್ರಸ್ತುತ ಹಳೆಯ NHAI ರಸ್ತೆಗಳಲ್ಲೂ ಟೋಲ್ ವಿಧಿಸುತ್ತಿರುವುದರಿಂದ, ಚಾಲಕರು ಹೊಸ ಹೆದ್ದಾರಿಗಳನ್ನು ತಪ್ಪಿಸುತ್ತಿದ್ದಾರೆ. ಈ ಪರಿಣಾಮದಿಂದ ಹೊಸ ಯೋಜನೆಗಳ ಆದಾಯ ಕುಗ್ಗಿ, ಖಾಸಗಿ ಹೂಡಿಕೆದಾರರಲ್ಲಿ ಹಿಂಜರಿಕೆ ಉಂಟಾಗುತ್ತಿದೆ.
ಹೊಸ ಯೋಜನೆಗೆ ಆಯ್ಕೆಯಾದ ಡೆವಲಪರ್ ಗೆ ಹಳೆಯ ಸಮಾನಾಂತರ ರಸ್ತೆಗಳನ್ನು ಟೋಲ್-ಆಪರೇಟ್-ಟ್ರಾನ್ಸ್ಫರ್ (TOT) ಅಥವಾ ಆಪರೇಷನ್ & ಮೆಂಟಿನೆನ್ಸ್ (O&M) ಮಾದರಿಯಲ್ಲಿ ನೀಡಲಾಗುತ್ತದೆ. ನಿರೀಕ್ಷಿತ ಸಂಚಾರ ಪ್ರಮಾಣ ತಲುಪದ ಸಂದರ್ಭಗಳಲ್ಲಿ, ಟೋಲ್ ದರ ತಿದ್ದುಪಡಿ ಮಾಡಲು ಅವಕಾಶವಿದೆ.
ಅಸ್ಸಾಂ ರಾಜ್ಯದ ಗುವಾಹಟಿ ರಿಂಗ್ ರೋಡ್ ನಲ್ಲಿ ಈ ಕ್ರಮ ಈಗಾಗಲೇ ಪ್ರಯೋಗಾತ್ಮಕವಾಗಿ ಜಾರಿಗೆ ಬಂದಿದ್ದು, ಶೀಘ್ರದಲ್ಲೇ ರಾಷ್ಟ್ರದಾದ್ಯಂತ ವಿಸ್ತರಿಸಲು ಯೋಜನೆ ಇದೆ.
“ಸಮಾನಾಂತರ ರಸ್ತೆಗಳನ್ನು ಒಂದೇ ಹೂಡಿಕೆದಾರನಿಗೆ ಒಪ್ಪಿಸುವುದು ಆದಾಯದ ನಿಖರ ಮಾಹಿತಿ ನೀಡುತ್ತದೆ. ಖಾಸಗಿ ಹೂಡಿಕೆದಾರರು ಬಿಒಟಿ ಮಾದರಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ,” ಎಂದು ಇವೈ ಇಂಡಿಯಾ ಮೂಲಸೌಕರ್ಯ ಸಲಹಾ ವಿಭಾಗದ ಪಾಲುದಾರ ಶೈಲೇಶ್ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಎನ್ಎಚ್ಎಐ ಈಗಾಗಲೇ 2.1 ಟ್ರಿಲಿಯನ್ ರೂಪಾಯಿ ಮೌಲ್ಯದ 53 ಹೆದ್ದಾರಿ ಯೋಜನೆಗಳನ್ನು ಬಿಲ್ಡ್-ಆಪರೇಟ್-ಟ್ರಾನ್ಸ್ಫರ್ (BOT) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಗುರುತಿಸಿದೆ. ಇನ್ನೂ 100ಕ್ಕೂ ಹೆಚ್ಚು ವಿಸ್ತರಣೆ ಯೋಜನೆಗಳು ಅಂತಿಮ ಹಂತದಲ್ಲಿದ್ದು, ಬಹುತೇಕ ಹೊಸ ಪ್ಯಾಕೇಜ್ ಮಾದರಿಯಲ್ಲಿ ಬಿಡ್ಡರ್ ಗಳಿಗೆ ನೀಡುಲ ಸಾಧ್ಯತೆ ಇದೆ.
ರಸ್ತೆಗಳನ್ನು ಒಂದೇ ಡೆವಲಪರ್ ಗೆ ಒಪ್ಪಿಸುವ ಈ ಹೊಸ ಕ್ರಮವು ಹೊಸ ಹೆದ್ದಾರಿ ಯೋಜನೆಗಳ ಆದಾಯ ಭರವಸೆ ಹೆಚ್ಚಿಸಿ, ಖಾಸಗಿ ಹೂಡಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.







