Dubai Air show | ಸ್ವದೇಶಿ ನಿರ್ಮಿತ ಫೈಟರ್ ಜೆಟ್ ತೇಜಸ್ ಪತನವಾಗಿದ್ದು ಹೇಗೆ?

Screengrab : X
ಹೊಸದಿಲ್ಲಿ,ನ.21: ಭಾರತೀಯ ವಾಯುಪಡೆಯ ಸ್ವದೇಶಿ ನಿರ್ಮಿತ ತೇಜಸ್ ಫೈಟರ್ ಜೆಟ್, ಶುಕ್ರವಾರ ದುಬೈನಲ್ಲಿ ನಡೆಯುತ್ತಿರುವ ಏರ್ಶೋನಲ್ಲಿ ಪತನಗೊಂಡಿದೆ. ಅದರಲ್ಲಿದ್ದ ಪೈಲೆಟ್ ಸಾವನ್ನಪ್ಪಿದ್ದಾನೆ. ಮಧ್ಯಾಹ್ನ 2:30ರ ವೇಳೆಗೆ ಅಲ್ ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರಾಟ ಪ್ರದರ್ಶನ ನೀಡುತ್ತಿದ್ದ ‘ತೇಜಸ್’ ಜನ ಸಾಗರದ ಕಣ್ಣೆದುರೇ ನೆಲಕ್ಕಪ್ಪಳಿಸಿದೆ. ವಿಮಾನವು ಸುಟ್ಟುಕರಕಲಾಗಿದ್ದು, ಸುತ್ತಲೂ ದಟ್ಟವಾದ ಕಪ್ಪುಹೊಗೆ ಆವರಿಸಿತು.
🚨🚨🚨BREAKING:
— Madmax OSINT 🇮🇪🇺🇦 (@madmaxburn88) November 21, 2025
🇦🇪 🇮🇳 An Indian HAL Tejas fighter jet crashed during an aerial display at the Dubai Air Show
All visitors of the Dubai Airshow are being evacuated after the crash of an Indian plane; rescuers and firefighters are working at the scene.#Tejas#DubaiAirShow pic.twitter.com/eDtTwt9HyE
ಅವಘಡದ ಕಾರಣವನ್ನು ದೃಢಪಡಿಸಲು ವಿಚಾರಣಾ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಭಾರತೀಯ ವಾಯುಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ(ಎಲ್ಸಿಎ)ವಾದ ತೇಜಸ್, ಒಂದೇ ಅಸನ ಸಾಮರ್ಥ್ಯ ಹೊಂದಿದ್ದು, ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿದೆ.
ಜಗತ್ತಿನ ಅತಿ ದೊಡ್ಡ ವೈಮಾನಿಕ ಪ್ರದರ್ಶನಗಳಲ್ಲೊಂದೆನಿಸಿರುವ ದ್ವೈವಾರ್ಷಿಕ ದುಬೈ ಏರ್ಶೋನಲ್ಲಿ ಈ ಅವಘಡ ಸಂಭವಿಸಿದೆ. ಯುಎಇ ಹಾಗೂ ಫ್ಲೈ ದುಬೈನಿಂದ ಬಹುಶತಕೋಟಿ ಡಾಲರ್ ವೆಚ್ಚದಲ್ಲಿ ವಿಮಾನಗಳ ಖರೀದಿಯನ್ನು ಈ ಏರ್ಶೋನಲ್ಲಿ ಘೋಷಿಸಲಾಗಿತ್ತು.
4.5 ತಲೆಮಾರಿನ ಮಲ್ಟಿ ರೋಲ್ ಯುದ್ಧ ವಿಮಾನವಾದ ತೇಜಸ್ ಅನ್ನು ವಾಯುರಕ್ಷಣಾ ಕಾರ್ಯಾಚರಣೆಗಳಿಗಾಗಿ ನಿರ್ಮಿಸಲಾಗಿದೆ. ಆಕ್ರಮಣಕ್ಕೆ ವೈಮಾನಿಕ ಬೆಂಬಲ, ನಿಕಟವಾದ ಸಂಘರ್ಷ ಕಾರ್ಯಾಚರಣೆಗಳಲ್ಲಿ ಇದು ಬಳಕೆಯಾಗುತ್ತಿದೆ. ತನ್ನ ವರ್ಗದ ವಿಮಾನಗಳಲ್ಲೇ ತೇಜಸ್ ಅತ್ಯಂತ ಲಘುವಾದ ಹಾಗೂ ಕಿರಿದಾದ ವಿಮಾನವಾಗಿದೆ.
ತೇಜಸ್ ಪತನಗೊಂಡ ಸಂದರ್ಭ ವೇಳೆಗೆ ಅಲ್ ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರನ್ವೇ ಸಮೀಪದ ಆವರಣದಿಂದಲೇ ನೂರಾರು ಪ್ರೇಕ್ಷಕರು ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ಆಗಸದಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸುತ್ತಿದ್ದ ತೇಜಸ್ ಇದ್ದಕ್ಕಿದ್ದಂತೆ ಸಮತೋಲನಕಳೆದುಕೊಂಡು, ಕೆಳಗಿಳಿಯಲಾರಂಭಿಸಿದ್ದು, ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿತ್ತು.
ಭಾರತೀಯ ವಾಯುಪಡೆಯ ಹಳೆಯ ಯುದ್ಧವಿಮಾನಗಳನ್ನು ಆಧುನೀಕರಣಗೊಳಿಸುವ ಹಾಗೂ ವಿದೇಶಿ ಯುದ್ಧವಿಮಾನಗಳ ಪೂರೈಕೆದಾರರ ಮೇಲಿನ ಆವಲಂಬನೆಯನ್ನು ಕಡಿಮೆಗೊಳಿಸುವ ತನ್ನ ಪ್ರಯತ್ನದ ಭಾಗವಾಗಿ ಭಾರತ ಹಮ್ಮಿಕೊಂಡಿರುವ ಯೋಜನೆಯಲ್ಲಿ ತೇಜಸ್ ಫೈಟರ್ಜೆಟ್ ಪ್ರಮುಖವಾದುದಾಗಿದೆ. ತೇಜಸ್ ಯುದ್ಧ ವಿಮಾನದ ಪ್ರಪ್ರಥಮ ಸ್ಕ್ವಾಡ್ರನ್ ಆದ ನಂ. 45 ‘ಫ್ಲೈಯಿಂಗ್ ಡ್ಯಾಗ್ಗರ್ಸ್’ 2016ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡಿತ್ತು.
►ತೇಜಸ್ ಇತಿಹಾಸದಲ್ಲಿ ಎರಡನೇ ಅವಘಡ
ಕಳೆದ ಎರಡು ವರ್ಷಗಳಲ್ಲಿ ತೇಜಸ್ ವಿಮಾನ ಪತನಗೊಂಡ ಎರಡನೇ ಘಟನೆ ಇದಾಗಿದೆ. 2024ರ ಮಾರ್ಚ್ನಲ್ಲಿ ರಾಜಸ್ಥಾನದ ತೇಜಸ್ ವಿಮಾನ ನೆಲಕ್ಕಪ್ಪಳಿಸಿತ್ತು. ಆದರೆ ವಿಮಾನಪತನಗೊಳ್ಳುವ ಮುನ್ನ ಪೈಲಟ್ ಪ್ಯಾರಾಚ್ಯೂಟ್ ಮೂಲಕ ಸುರಕ್ಷಿತವಾಗಿ ಜಿಗಿಯುವಲ್ಲಿ ಸಫಲನಾಗಿದ್ದರು. 2001ರಲ್ಲಿ ಚೊಚ್ಚಲ ಹಾರಾಟ ನಡೆಸಿದ ತೇಜಸ್ ವಿಮಾನದ 23 ವರ್ಷಗಳ ಇತಿಹಾಸದಲ್ಲೇ ಮೊತ್ತ ಮೊದಲ ಅವಘಡ ಅದಾಗಿತ್ತು.







