ಸೂರತ್ ವಿಮಾನ ನಿಲ್ದಾಣದಲ್ಲಿ 28 ಕೆಜಿ ಚಿನ್ನದ ಪೇಸ್ಟ್ ವಶ; ದಂಪತಿ ಬಂಧನ

Photo: X/@CISFHQrs
ಸೂರತ್/ಹೊಸದಿಲ್ಲಿ: ದುಬೈನಿಂದ ಆಗಮಿಸಿದ್ದ ದಂಪತಿಯಿಂದ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 28 ಕೆಜಿ ಚಿನ್ನದ ಪೇಸ್ಟ್ ಅನ್ನು ಸಿಐಎಸ್ಎಫ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು, ಬಂಧಿಸಿದ್ದಾರೆ. ಇದು ಸೂರತ್ ವಿಮಾನ ನಿಲ್ದಾಣದ ಇಹಾಸದಲ್ಲಿಯೇ ಅತಿದೊಡ್ಡ ಪ್ರಕರಣ ಎನ್ನಲಾಗಿದೆ.
ಜುಲೈ 20ರ ರಾತ್ರಿ 10 ಗಂಟೆ ಸುಮಾರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಈ ದಂಪತಿಯ ನಡೆಯು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರಿಗೆ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಬಳಿಕ ಅವರನ್ನು ತೀವ್ರ ತಪಾಸಣೆಗೊಳಿಸಿದಾಗ ಚಿನ್ನ ಕಳ್ಳ ಸಾಗಾಟ ಮಾಡುತ್ತಿರುವುದು ಕಂಡುಬಂತು ಎಂದು ತಿಳಿದು ಬಂದಿದೆ.
"ದಂಪತಿಗಳ ನಡೆ-ನುಡಿಗೆಗಳು ಸಾಮಾನ್ಯವಾಗಿರಲಿಲ್ಲ. ಹೊಟ್ಟೆ ಸುತ್ತಲೂ ಇರುವ ಅಸಾಧಾರಣ ಉಬ್ಬು, ಅವರ ನಡಿಗೆಯಲ್ಲಿನ ಅಸ್ಪಷ್ಟತೆ ಗಮನ ಸೆಳೆಯಿತು," ಎಂದು ಹಿರಿಯ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಸೂಚನೆಯ ಮೇರೆಗೆ ತಕ್ಷಣ ನಡೆಸಿದ ದೈಹಿಕ ತಪಾಸಣೆಯಲ್ಲಿ 28 ಕೆಜಿ ಚಿನ್ನದ ಪೇಸ್ಟ್ನ್ನು ಜಪ್ತಿ ಮಾಡಲಾಯಿತು. ಇದರಲ್ಲಿ ಮಹಿಳೆಯ ಬಳಿ 16 ಕೆಜಿಯಷ್ಟು ಮತ್ತು ಪುರುಷನ ಬಳಿ 12 ಕೆಜಿಯಷ್ಟು ಚಿನ್ನದ ಪೇಸ್ಟ್ ಇತ್ತು ಎಂದು ವರದಿಯಾಗಿದೆ.
"ಚಿನ್ನದ ಪೇಸ್ಟ್ ಅವರ ದೇಹದ ಮಧ್ಯಭಾಗ ಹಾಗೂ ಎದೆಯ ಭಾಗದ ಸುತ್ತಲೂ ಸುತ್ತಿ ಬಟ್ಟೆಯ ಒಳಗೆ ಬಚ್ಚಿಡಲಾಗಿತ್ತು. ಪೇಸ್ಟ್ ನ ಶುದ್ಧತೆಯನ್ನು ಆಧರಿಸಿ, ಚಿನ್ನದ ತೂಕ 20 ಕೆಜಿಗೂ ಮೀರಬಹುದು," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇದು ಸೂರತ್ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಅತ್ಯಂತ ಭಾರಿ ಚಿನ್ನದ ಕಳ್ಳ ಸಾಗಣೆಯಾಗಿರಬಹುದು," ಎಂದು ತನಿಖೆ ಮಾಡುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಸಿಐಎಸ್ಎಫ್ ಮತ್ತು ಕಸ್ಟಮ್ಸ್ ಇಲಾಖೆಯು ಜಂಟಿಯಾಗಿ ಕಾರ್ಯಚರಣೆ ನಡೆಸಿದೆ. ಪ್ರಸ್ತುತ, ಬಂಧಿತ ದಂಪತಿಯ ವಿರುದ್ಧ ಕಾನೂನು ಕ್ರಮ ಜಾರಿಯಲ್ಲಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.







