ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ತಡೆ

ಹೊಸದಿಲ್ಲಿ: ಪ್ರಸ್ತಾವಿತ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ವಿಧಾನಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಡಿಸೆಂಬರ್ 5ರವರೆಗೆ ಕೈಗೊಳ್ಳದಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ದೇಶಾದ್ಯಂತ ಎಲ್ಲ 2.7 ಲಕ್ಷ ಪಂಚಾಯ್ತಿಗಳಲ್ಲಿ ವಿಕಸಿತ ಭಾರತ ಸಂಕಲ್ಪಯಾತ್ರೆಯನ್ನು ಕೈಗೊಳ್ಳುವ ಮಹಾ ಅಭಿಯಾನವನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು. ಸರ್ಕಾರದ ಎಲ್ಲ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳನ್ನು ತಲುಪುವ ಪ್ರಯತ್ನವಾಗಿ ಹಾಗೂ ಇನ್ನೂ ಹೊರಗೆ ಉಳಿದಿರುವವರು ಮರು ನೋಂದಣಿ ಮಾಡಿಕೊಳ್ಳಲು ಅನುವಾಗುವಂತೆ ಈ ಅಭಿಯಾನ ಕೈಗೊಳ್ಳಲು ಉದ್ದೇಶಿಸಲಾಗಿತ್ತು.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿವೆ. ನವೆಂಬರ್ ತಿಂಗಳ ಬೇರೆ ಬೇರೆ ದಿನಾಂಕಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಅರ್ಹರಾಗಿದ್ದರೂ, ಇದರ ಪ್ರಯೋಜನವನ್ನು ಇನ್ನೂ ಪಡೆಯದ ಫಲಾನುಭವಿಗಳಿಗಾಗಿ ವಿಕಸಿತ ಭಾರತ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕಿಸಾನ್ ಕ್ರೆಡಿಟ್‍ಕಾರ್ಡ್, ಗ್ರಾಮೀಣ ಗೃಹ ಯೋಜನೆ, ಉಜ್ವಲ ಯೋಜನೆ, ಪಿಎಂ ಸ್ವನಿಧಿ ಯೋಜನೆ ಮತ್ತಿತರ ಯೋಜನೆಗಳ ಬ್ರಾಂಡಿಂಗ್ ಇರುವ 2500ಕ್ಕೂ ಅಧಿಕ ಐಇಸಿ ವ್ಯಾನ್‍ಗಳು ಹಾಗೂ 200 ಮೊಬೈಲ್ ಥಿಯೇಟರ್ ವ್ಯಾನ್‍ಗಳ ಮೂಲಕ 2.55 ಲಕ್ಷ ಗ್ರಾಮಪಂಚಾಯ್ತಿಗಳನ್ನು, ಎಲ್ಲ ನಗರ ಹಾಗೂ ಪಟ್ಟಣಗಳ ಕ್ಲಸ್ಟರ್‍ಗಳನ್ನು ತಲುಪಲು ಉದ್ದೇಶಿಸಲಾಗಿದೆ.







