ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಚುನಾವಣಾ ಆಯೋಗ ಸಂಚು ರೂಪಿಸಿದೆ: ಅಶೋಕ್ ಗೆಹ್ಲೋಟ್ ಆರೋಪ

ಅಶೋಕ್ ಗೆಹ್ಲೋಟ್ (Photo: PTI)
ಜೈಪುರ : ಬಿಹಾರದಲ್ಲಿ ಆಡಳಿತ ಪಕ್ಷದೊಂದಿಗೆ ಸೇರಿಕೊಂಡು ಚುನಾವಣಾ ಆಯೋಗ ಸಂಚು ರೂಪಿಸಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮಹಿಳೆಯರಿಗೆ 10,000ರೂ. ನಗದು ಸೇರಿದಂತೆ ಮತದಾರರಿಗೆ ಸವಲತ್ತುಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಹಾರ ಚುನಾವಣಾ ಫಲಿತಾಂಶ ನಿರಾಶೆಯನ್ನುಂಟುಮಾಡಿದೆ. ಪ್ರಚಾರದ ಅವಧಿಯಲ್ಲಿ ಪಿಂಚಣಿಗಳ ಪಾವತಿ ಮತ್ತು ನಗದು ವರ್ಗಾವಣೆ ನಿರಂತರವಾಗಿ ಮುಂದುವರಿದಿವೆ. ಇಂತಹದ್ದು ಸಾಮಾನ್ಯವಾಗಿ ಆಗುವುದಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಸಂಹಿತೆ ಜಾರಿಗೆ ಬಂದ ತಕ್ಷಣದಿಂದಲೇ ಒಂದು ಯೋಜನೆಯಡಿ ನೀಡುತ್ತಿದ್ದ ಮೊಬೈಲ್ ಫೋನ್ಗಳ ವಿತರಣೆ ಮತ್ತು ಪಿಂಚಣಿ ವಿತರಣೆಯನ್ನು ನಿಲ್ಲಿಸಲಾಯಿತು. ಬಿಹಾರದಲ್ಲಿ ಚುನಾವಣಾ ಆಯೋಗ ಮೂಕ ಪ್ರೇಕ್ಷಕರಾಗಿಯೇ ಉಳಿಯಿತು. ಇದನ್ನು ಏಕೆ ನಿಲ್ಲಿಸಲಿಲ್ಲ? ಚುನಾವಣಾ ಆಯೋಗ ಇದರಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ಆರೋಪಿಸಿದರು.
ನ್ಯಾಯಯುತ ಚುನಾವಣೆಗಳು ನಡೆಯದಿದ್ದಾಗ, ಬೂತ್ ಕ್ಯಾಪ್ಚರಿಂಗ್ ಅಥವಾ ಅಕ್ರಮಗಳು ನಡೆದಾಗ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದು ಮತ ಕಳ್ಳತನ ಎಂದು ಗೆಹ್ಲೋಟ್ ಆರೋಪಿಸಿದರು.







