ಬಿಹಾರ ಎಸ್ಐಆರ್ | ಮತದಾರರ ಪಟ್ಟಿಯಿಂದ ಎಷ್ಟು ನಾಗರಿಕರಲ್ಲದವರನ್ನು ತೆಗೆದುಹಾಕಲಾಗಿದೆ ಎಂದು ಹೇಳಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗಿಲ್ಲ: ಕಾಂಗ್ರೆಸ್ ಟೀಕೆ

ಜೈರಾಮ್ ರಮೇಶ್ (Photo: PTI)
ಹೊಸದಿಲ್ಲಿ : ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (SIR) ಉದ್ದೇಶ ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದಾಗಿ ಹೇಳಲಾಗಿತ್ತು. ಆದರೆ ಚುನಾವಣಾ ಆಯೋಗ ಎಷ್ಟು ನಾಗರಿಕರಲ್ಲದವರನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂಬುದನ್ನು ಬಹಿರಂಗಪಡಿಸಲು ಧೈರ್ಯ ಅಥವಾ ಪ್ರಾಮಾಣಿಕತೆ ತೋರಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಹಾರ ಎಸ್ಐಆರ್ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣೆಯನ್ನು ಹಂಚಿಕೊಂಡ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಮಂಗಳವಾರ ಮತ್ತೆ ಪ್ರಾರಂಭವಾಗುತ್ತದೆ. ಚುನಾವಣಾ ಆಯೋಗ ಪೂರ್ಣಗೊಳಿಸಿದ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣತೆ, ಸಮಾನತೆ ಮತ್ತು ನಿಖರತೆಯ ಮೂರು ಅಂಶಗಳಲ್ಲಿಯೂ ವಿಫಲವಾಗಿದೆ ಎಂದು ವಿಶ್ಲೇಷಣೆಯು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಎಸ್ಐಆರ್ ನಡೆಸಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಆದರೆ ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶವನ್ನು ಜಾಗೃತಗೊಳಿಸುವ ಧೈರ್ಯ ಅಥವಾ ಪ್ರಾಮಾಣಿಕತೆ ಚುನಾವಣಾ ಆಯೋಗ ತೋರಿಲ್ಲ. ಆಯೋಗ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದರೆ ಈಗಿರುವುದಕ್ಕಿಂತಲೂ ಹೆಚ್ಚು ಬಯಲಾಗುತ್ತಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.





