ಬಿಹಾರ ಕರಡು ಮತದಾರರ ಪಟ್ಟಿಗಳಿಂದ ಹೆಸರುಗಳನ್ನು ಅಳಿಸುವಂತೆ ಚುನಾವಣಾ ಆಯೋಗಕ್ಕೆ 1.97 ಲಕ್ಷ ಅರ್ಜಿಗಳು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯಡಿ ಹೆಸರುಗಳನ್ನು ಅಳಿಸುವಂತೆ ಕೋರಿ 1.97 ಲಕ್ಷ ಆಕ್ಷೇಪಣೆಗಳು ಮತ್ತು ಹೆಸರುಗಳ ಸೇರ್ಪಡೆಗಾಗಿ 29,872 ಅರ್ಜಿಗಳನ್ನು ತಾನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗವು ತಿಳಿಸಿದೆ.
ಕರಡು ಪಟ್ಟಿಗಳಿಗೆ ಹೆಚ್ಚುವರಿ ದಾಖಲೆಗಳು,ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೋಮವಾರ ಅಂತಿಮ ದಿನವಾಗಿದೆ.
ಆ.1ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಗಳಿಂದ 65.6 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು,ಈ ಪೈಕಿ 22 ಲಕ್ಷ ಮತದಾರರು ಮೃತಪಟ್ಟಿದ್ದಾರೆ,36 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಹಾಗೂ ಏಳು ಲಕ್ಷ ಮತದಾರರ ಹೆಸರುಗಳು ನಕಲು ನಮೂದುಗಳಾಗಿವೆ ಎಂದು ಚುನಾವಣಾ ಆಯೋಗವು ಹೇಳಿದೆ.
ಆ.1ರಿಂದ 13.3 ಲಕ್ಷ ಮೊದಲ ಬಾರಿಯ ಮತದಾರರು ನೋಂದಣಿಗೆ ಅರ್ಜಿ ಸಲ್ಲಿಸಿದ್ದು,ಇದರೊಂದಿಗೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರುಗಳು ಕರಡು ಪಟ್ಟಿಗಳಲ್ಲಿನ 7.24 ಕೋಟಿಯನ್ನು ಮೀರಬಹುದು ಎಂದು ಆಯೋಗವು ಶನಿವಾರ ತಿಳಿಸಿದೆ.
ಚುನಾವಣಾ ಆಯೋಗದ ಪ್ರಕಾರ ಈವರೆಗೆ ಶೇ.99.11ರಷ್ಟು ಮತದಾರರು ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಪ್ರತ್ಯೇಕವಾಗಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳು ಸೇರ್ಪಡೆಯನ್ನು ಕೋರಿ 25 ಮತ್ತು ಹೆಸರುಗಳನ್ನು ಅಳಿಸುವಂತೆ ಕೋರಿ 103 ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕರಡು ಮತದಾರರ ಪಟ್ಟಿಗಳು ಜೂ.24 ಮತ್ತು ಜು.26ರ ನಡುವೆ ಚುನಾವಣಾ ಆಯೋಗಕ್ಕೆ ಎಣಿಕೆ ನಮೂನೆಗಳನ್ನು ಸಲ್ಲಿಸಿರುವ ಮತದಾರರರನ್ನು ಒಳಗೊಂಡಿವೆ. ಅಂತಿಮ ಮತದಾರರ ಪಟ್ಟಿಯು ಸೆ.30ರಂದು ಪ್ರಕಟಗೊಳ್ಳಲಿದೆ.
ಈ ವರ್ಷದ ಅಕ್ಟೋಬರ್-ನವಂಬರ್ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ.







