ಚುನಾವಣಾ ಆಯೋಗಕ್ಕೆ SIR ನಡೆಸುವ ಕಾನೂನುಬದ್ಧ ಹಕ್ಕಿಲ್ಲ: ಲೋಕಸಭೆಯಲ್ಲಿ ಮನೀಶ್ ತಿವಾರಿ ವಾಗ್ದಾಳಿ

Photo credit: X/@ANI
ಹೊಸದಿಲ್ಲಿ: ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಂಗಳವಾರ ಗರಿಗೆದರಿದ ವಾತಾವರಣ ನಿರ್ಮಾಣಗೊಂಡಿದ್ದು, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಭಾರತೀಯ ಚುನಾವಣಾ ಆಯೋಗದ (ECI) ತಟಸ್ಥತೆ ಮತ್ತು ಅದರ ಅಧಿಕಾರ ವ್ಯಾಪ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ರಾಜ್ಯಗಳಲ್ಲಿ ಜಾರಿಯಲ್ಲಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಆಯೋಗದ ಬಳಿ ಕಾನೂನುಬದ್ಧ ಆಧಾರವಿಲ್ಲ ಎಂದು ಅವರು ಆರೋಪಿಸಿದರು.
ಸದನವನ್ನುದ್ದೇಶಿಸಿ ಮಾತನಾಡಿದ ಮನೀಷ್ ತಿವಾರಿ, “ಚುನಾವಣೆಗಳಂತಹ ಮೂಲಭೂತ ಪ್ರಕ್ರಿಯೆಯನ್ನು ನಿರ್ವಹಿಸುವ ಸಂಸ್ಥೆಯ ತಟಸ್ಥತೆ ಸಂಶಯಕ್ಕೆ ಒಳಗಾಗಿರುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಬೆಳವಣಿಗೆಯಲ್ಲ” ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಸುಧಾರಣೆಗಳ ಮೊದಲ ಹೆಜ್ಜೆಯಾಗಿ ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ವಿಧಾನದಲ್ಲಿ ಬದಲಾವಣೆಯಾಗಬೇಕು ಎಂದು ತಿವಾರಿ ಆಗ್ರಹಿಸಿದರು.
ಅವರ ಪ್ರಸ್ತಾಪದ ಪ್ರಕಾರ, ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ಮತ್ತು ಭಾರತದ ಮುಖ್ಯ ನ್ಯಾಯಾಧೀಶರು (CJI) ಆಯೋಗದ ಸದಸ್ಯರ ಆಯ್ಕೆ ಸಮಿತಿಯಲ್ಲಿ ಇರಬೇಕು.“ಆಯೋಗದ ರಚನೆ ಪಾರದರ್ಶಕವಾಗಿರಬೇಕಾದರೆ ಈ ಬದಲಾವಣೆ ಅತ್ಯಾವಶ್ಯಕ,” ಎಂದು ಅವರು ಹೇಳಿದರು.
ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ SIR ಕುರಿತು ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.
“ದೇಶದ ಅನೇಕ ರಾಜ್ಯಗಳಲ್ಲಿ SIR ನಡೆಯುತ್ತಿದೆ, ಆದರೆ ಅದಕ್ಕೆ ಚುನಾವಣಾ ಆಯೋಗವು ಯಾವ ಕಾನೂನು ಸಮರ್ಥನೆಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲ,” ಎಂದು ಅವರು ಹೇಳಿದರು.
ಚರ್ಚೆಯಲ್ಲಿ ಕೆ.ಸಿ. ವೇಣುಗೋಪಾಲ್, ವರ್ಷಾ ಗಾಯಕ್ವಾಡ್, ಮುಹಮ್ಮದ್ ಜಾವೈದ್, ಉಜ್ವಲ್ ರಮಣ್ ಸಿಂಗ್, ಇಸಾ ಖಾನ್, ರವಿ ಮಲ್ಲು, ಇಮ್ರಾನ್ ಮಸೂದ್, ಗೋವಾಲ್ ಪದವಿ, ಎಸ್. ಜ್ಯೋತಿಮಣಿ ಸೇರಿ ಹಲವು ವಿರೋಧ ಪಕ್ಷದ ಸಂಸದರು ಪಾಲ್ಗೊಂಡರು. ಲೋಕಸಭೆಯ ವಿರೋಧ ಪಕ್ಷದ ನಾಯಕರು ಕೂಡ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುವ ನಿರೀಕ್ಷೆಯಿದೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನಿರೀಕ್ಷೆ
SIR ಮತ್ತು ಚುನಾವಣಾ ಸುಧಾರಣೆಗಳ ಕುರಿತ ಚರ್ಚೆ ರಾಜ್ಯಸಭೆಯಲ್ಲೂ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ನಿಲುವನ್ನು ವಿವರಿಸುವ ಸಾಧ್ಯತೆಯಿದೆ.
ಉಭಯ ಸದನಗಳಲ್ಲಿ ಚರ್ಚೆಗೆ ಒಟ್ಟು 10 ಗಂಟೆಗಳನ್ನು ಮೀಸಲಿರಿಸಲಾಗಿದೆ.







