ಕರ್ನಾಟಕದ ಜನಸಂಖ್ಯೆ ಎಷ್ಟು? ಚುನಾವಣಾ ಆಯೋಗ-ರಾಷ್ಟ್ರೀಯ ಜನಸಂಖ್ಯಾ ಆಯೋಗದ ಅಂಕಿ ಅಂಶಗಳಲ್ಲಿ 1 ಕೋಟಿ ವ್ಯತ್ಯಾಸ!

Photo | deccanherald
ಬೆಂಗಳೂರು : 2025ರಲ್ಲಿ ಕರ್ನಾಟಕದ ಜನಸಂಖ್ಯೆ 7.86 ಕೋಟಿ ಇದೆ ಎಂದು ಚುನಾವಣಾ ಆಯೋಗವು ಅಂದಾಜಿಸಿದೆ. ಆದರೆ, ರಾಷ್ಟ್ರೀಯ ಜನಸಂಖ್ಯಾ ಆಯೋಗವು 6.85 ಕೋಟಿ ಎಂದು ಅಂದಾಜಿಸಿದೆ. ಚುನಾವಣಾ ಆಯೋಗ ಹಾಗೂ ರಾಷ್ಟ್ರೀಯ ಜನಸಂಖ್ಯಾ ಆಯೋಗದ ಅಂಕಿ ಅಂಶಗಳಲ್ಲಿ ಸರಿಸುಮಾರು ಒಂದು ಕೋಟಿ ವ್ಯತ್ಯಾಸ ಕಂಡುಬಂದಿದೆ.
2011ರ ಜನಗಣತಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆ 6.10 ಕೋಟಿ. ಈ ದತ್ತಾಂಶ 14 ವರ್ಷ ಹಳೆಯದಾಗಿರುವುದರಿಂದ ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಆಂತರಿಕ ಮೀಸಲಾತಿ, ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಜನಗಣತಿ) ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ರೂಪಿಸಲು ನಿಖರವಾದ ಜನಸಂಖ್ಯಾ ಅಂದಾಜುಗಳು ಬೇಕಾಗುತ್ತವೆ.
ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ, ಪರಿಶಿಷ್ಟ ಜಾತಿಗಳಿಗೆ ಆಂತರಿಕ ಮೀಸಲಾತಿ ಒದಗಿಸುವ ಸಮೀಕ್ಷೆಯ ಮೇಲ್ವಿಚಾರಣೆ ನಡೆಸುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ಆಯೋಗದ ಟಿಜಿಪಿಪಿ (Technical Group on Projected Populations) ಅಂದಾಜು ಮಾಡಿದಂತೆ 6.85 ಕೋಟಿ ಜನಸಂಖ್ಯೆಯನ್ನು ಬಳಸಿಕೊಂಡಿದೆ.
ಹಿಂದುಳಿದ ವರ್ಗಗಳ ಆಯೋಗ ಜಾತಿಗಣತಿಯನ್ನು ನಡೆಸಲಿದೆ. ಆದರೆ ಯಾವ ಅಂದಾಜನ್ನು ಅವಲಂಬಿಸಬೇಕೆಂದು ಇನ್ನೂ ನಿರ್ಧರಿಸಿಲ್ಲ. ʼನಾವು ಸಭೆ ನಡೆಸಿದ್ದೇವೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆʼ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಹೇಳಿದರು.
ʼಕೋಹಾರ್ಟ್ ಕಾಂಪೊನೆಂಟ್ʼ ವಿಧಾನ (Cohort Component Method ) ಮೂಲಕ ಫಲವತ್ತತೆ, ಮರಣ ಮತ್ತು ವಲಸೆ ದರಗಳನ್ನು ಆಧರಿಸಿ ಜನಸಂಖ್ಯಾ ಬೆಳವಣಿಗೆಯನ್ನು ನಿರ್ಧರಿಸಲಾಗುತ್ತದೆ.
ರಾಜ್ಯದಲ್ಲಿ ಒಟ್ಟು ಫಲವತ್ತತೆ ದರ (ಓರ್ವ ಮಹಿಳೆ ಜನ್ಮ ನೀಡುವ ಒಟ್ಟು ಮಕ್ಕಳ ಸಂಖ್ಯೆ) ಕಡಿಮೆಯಾಗಿರುವುದರ ನೇರ ಪರಿಣಾಮವಾಗಿ ಕರ್ನಾಟಕದಲ್ಲಿ ಜನಸಂಖ್ಯಾ ಬೆಳವಣಿಗೆಯ ದರವು 2011-15ರ ಅವಧಿಯಲ್ಲಿ1% ಇದ್ದದ್ದು, 2021-25ರಲ್ಲಿ 0.6% ಕ್ಕೆ ಇಳಿಕೆಯಾಗಿದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.
ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಮೊದಲು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಆಧರಿಸಿ ದಶಕದ ಬೆಳವಣಿಗೆಯ ದರವನ್ನು ನಿರ್ಧರಿಸಲಾಗುತ್ತದೆ. ನಂತರ ಈ ಅಂಕಿ ಅಂಶವನ್ನು ಬಳಸಿಕೊಂಡು ರೇಖಾಗಣಿತದ ಮಾನದಂಡದಂತೆ ಯೋಜಿತ ಜನಸಂಖ್ಯೆಯನ್ನು ಲೆಕ್ಕಹಾಕುತ್ತಾರೆ. ಇದಕ್ಕೆ ಸಂಭಾವ್ಯ ವಲಸೆ ಅಂಕಿಅಂಶಗಳನ್ನು ಸೇರಿಸಿ 7.86 ಕೋಟಿ ಜನಸಂಖ್ಯೆ ಅಂದಾಜನ್ನು ಪಡೆಯಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಕುತೂಹಲಕಾರಿಯಾಗಿ, 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಬೆಳವಣಿಗೆಯ ದರವು, ಎರಡೂ ಅಂದಾಜುಗಳಲ್ಲಿ ಸರಿಸುಮಾರು ಒಂದೇ ಆಗಿರುತ್ತದೆ.
ಚುನಾವಣಾ ಆಯೋಗವು ಜನಸಂಖ್ಯಾ ಲೆಕ್ಕಾಚಾರದಲ್ಲಿ ಸ್ಥಿರ ಬೆಳವಣಿಗೆಯ ದರವನ್ನು ಬಳಸಿರುವುದೇ, ಇತ್ತೀಚಿನ ಅಂದಾಜುಗಳಲ್ಲಿನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ ಎಂದು ಜನಸಂಖ್ಯಾಶಾಸ್ತ್ರಜ್ಞ ಪ್ರೊ. ಪುರುಷೋತ್ತಮ ಎಂ. ಕುಲಕರ್ಣಿ ತಿಳಿಸಿದ್ದಾರೆ.
"ಮತದಾನದ ವಯೋಮಿತಿಗೆ (18 ವರ್ಷ ಮೇಲ್ಪಟ್ಟವರು) ಎರಡೂ ಅಂದಾಜುಗಳಲ್ಲಿ ಬೆಳವಣಿಗೆಯ ದರ ಸಮಾನವಾಗಿದೆ. ಆದರೆ, 0-17 ವಯಸ್ಸಿನ ಗುಂಪಿನಲ್ಲಿ ಫಲವತ್ತತೆ ದರದ ಕಡಿತವನ್ನು ಪರಿಗಣಿಸದಿರುವುದು ಲೆಕ್ಕಾಚಾರದಲ್ಲಿ ಅಸಮಾನತೆ ಉಂಟುಮಾಡಿದೆ. ಇದರ ಪರಿಣಾಮವಾಗಿ, ಈ ವಯೋಮಿತಿಯ ಜನಸಂಖ್ಯೆಯ ಬೆಳವಣಿಗೆಯ ದರ ಗಮನಾರ್ಹವಾಗಿ ಕಡಿಮೆಯಾಗಿದೆ" ಎಂದು ಅವರು ಹೇಳಿದರು.
ಟಿಜಿಪಿಪಿ ಅಂದಾಜುಗಳಲ್ಲಿ, ಮಕ್ಕಳ ವಯಸ್ಸನ್ನು ವಿಭಾಗಿಸುವುದು, ಫಲವತ್ತತೆ ಮತ್ತು ಮರಣ ಪ್ರಮಾಣವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದ ಹೆಚ್ಚು ನಿಖರವಾಗಿವೆ.