ಎರಡು ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪ | ಮುಝಫ್ಫರ್ ಪುರ್ ಬಿಜೆಪಿ ಮೇಯರ್ ಗೆ ಚುನಾವಣಾ ಆಯೋಗದಿಂದ ನೋಟಿಸ್

Credit: X/@yadavtejashwi
ಪಟ್ನಾ: ಎರಡು ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪಕ್ಕೆ ಗುರಿಯಾಗಿರುವ ಮುಝಫ್ಫರ್ ಪುರ್ ನ ಬಿಜೆಪಿ ಮೇಯರ್ ನಿರ್ಮಲಾ ದೇವಿಗೆ ಬುಧವಾರ ನೋಟಿಸ್ ಜಾರಿಗೊಳಿಸಿರುವ ಚುನಾವಣಾ ಆಯೋಗ, ಆಗಸ್ಟ್ 16ರೊಳಗೆ ನೋಟಿಸ್ ಗೆ ಉತ್ತರಿಸುವಂತೆ ಅವರಿಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದೇ ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರುವ ನಿರ್ಮಲಾ ದೇವಿಯ ಸಂಬಂಧಿಕರಾದ ಮನೋಜ್ ಕುಮಾರ್ ಹಾಗೂ ದಿಲೀಪ್ ಕುಮಾರ್ ಅವರಿಗೂ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್, ಮುಝಫ್ಫರ್ ಪುರ್ ಮೇಯರ್ ಹಾಗೂ ಅವರ ಸಂಬಂಧಿಕರು ಎರಡೆರಡು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ಮುಝಫ್ಫರ್ ಪುರ್ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿಗಳು ನಿರ್ಮಲಾ ದೇವಿ ಹಾಗೂ ಅವರ ಇಬ್ಬರು ಸಂಬಂಧಿಕರಿಗೆ ನೋಟಿಸ್ ರವಾನಿಸಿದ್ದು, ಎರಡೆರಡು ಮತದಾರರ ಗುರುತಿನ ಚೀಟಿ ಹೊಂದಿರುವ ಕುರಿತು ಆಗಸ್ಟ್ 16ರೊಳಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಅವರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತಗಳ್ಳತನ ನಡೆಸಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಹಾಗೂ ಬಿಜೆಪಿ ನಾಯಕರು ತಲಾ ಎರಡು ಮತದಾರರ ಚೀಟಿ ಪಡೆಯಲು ನೆರವು ನೀಡುತ್ತಿದೆ ಎಂದು ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಅಲ್ಲಗಳೆದಿದ್ದ ಬಿಜೆಪಿ, ಈ ಆರೋಪಗಳು ಸುಳ್ಳು ಮತ್ತು ದಾರಿ ತಪ್ಪಿಸುವಂಥದ್ದಾಗಿವೆ ಎಂದು ಪ್ರತ್ಯಾರೋಪ ಮಾಡಿತ್ತು.







