ಎಸ್ಐಆರ್| 12 ರಾಜ್ಯಗಳಲ್ಲಿ ಗಡುವು ವಿಸ್ತರಿಸಿದ ಚುನಾವಣಾ ಆಯೋಗ : ಫೆಬ್ರವರಿ 14ರಂದು ಮತದಾರರ ಅಂತಿಮ ಪಟ್ಟಿ ಬಿಡುಗಡೆ

ಚುನಾವಣಾ ಆಯೋಗ |Photo Credit : PTI
ಹೊಸದಿಲ್ಲಿ: 12 ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳಾಪಟ್ಟಿಯನ್ನು ಒಂದು ವಾರ ವಿಸ್ತರಿಸುವ ಮೂಲಕ ಭಾರತೀಯ ಚುನಾವಣಾ ಆಯೋಗ (ECI) ರವಿವಾರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜನವರಿ 1, 2026 ಅನ್ನು ಅರ್ಹತಾ ದಿನಾಂಕವಾಗಿ ನಿಗದಿ ಮಾಡುವ ಮೂಲಕ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿದಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಎಣಿಕೆ ಅವಧಿ ಹಾಗೂ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಮರು ಜೋಡಣೆ ಕಾರ್ಯ ಈಗ ಡಿಸೆಂಬರ್ 11, 2025ರೊಳಗೆ ಪೂರ್ಣಗೊಳ್ಳಬೇಕು.ಕರಡು ಮತದಾರರ ಪಟ್ಟಿಯ ತಯಾರಿ ಡಿಸೆಂಬರ್ 12ರಿಂದ 15ರವರೆಗೆ ನಡೆಯಲಿದೆ.
ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 16, 2025ರಂದು ಪ್ರಕಟಿಸಲಾಗುವುದು. ಅಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 16ರಿಂದ ಜನವರಿ 15, 2026ರವರೆಗೆ ಗಡುವು ನೀಡಲಾಗಿದೆ. ಚುನಾವಣಾ ನೋಂದಣಿ ಅಧಿಕಾರಿಗಳು (ERO) ನೋಟಿಸ್ ವಿತರಣೆ, ವಿಚಾರಣೆ, ಪರಿಶೀಲನೆ ಹಾಗೂ ಆಕ್ಷೇಪಣೆಗಳನ್ನು ಡಿಸೆಂಬರ್ 16, 2025ರಿಂದ ಫೆಬ್ರವರಿ 7, 2026ರವರೆಗೆ ಏಕಕಾಲದಲ್ಲಿ ನಡೆಸಲಿದ್ದಾರೆ.
ಅಂತಿಮ ಮತದಾರರ ಪಟ್ಟಿಗೆ ಆಯೋಗದ ಅನುಮೋದನೆ ಪಡೆಯುವ ಗಡುವು ಫೆಬ್ರವರಿ 10, 2026 ಆಗಿದ್ದು, ಅಂತಿಮ ಮತದಾರರ ಪಟ್ಟಿ ಫೆಬ್ರವರಿ 14, 2026ರಂದು ಪ್ರಕಟವಾಗಲಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಚುನಾವಣಾ ಆಯೋಗದ ಹೆಚ್ಚುವರಿ ನಿರ್ದೇಶಕ ಅಪೂರ್ವ ಕುಮಾರ್ ಸಿಂಗ್ ಬಿಡುಗಡೆ ಮಾಡಿದ್ದಾರೆ.







