ಅಕ್ರಮ ಹಣ ವರ್ಗಾವಣೆ ಪ್ರಕರಣ | ಪಿಎಫ್ಐ ನ 67 ಕೋಟಿ ರೂಪಾಯಿ ಮೌಲ್ಯದ ಇನ್ನಷ್ಟು ಆಸ್ತಿಗಳನ್ನು ಜಪ್ತಿ ಮಾಡಿದ ಈಡಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.8: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ 67 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲು ನ.6ರಂದು ಹೊಸ ಆದೇಶವನ್ನು ಹೊರಡಿಸಿರುವುದಾಗಿ ಜಾರಿ ನಿರ್ದೇಶನಾಲಯ(ಈಡಿ)ವು ಶನಿವಾರ ತಿಳಿಸಿದೆ.
ಈ ಆಸ್ತಿಗಳು ಪಿಎಫ್ಐನ ಒಡೆತನ ಮತ್ತು ನಿಯಂತ್ರಣದಲ್ಲಿವೆ ಹಾಗೂ ಅದರ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಮತ್ತು ವಿವಿಧ ಟ್ರಸ್ಟ್ಗಳ ಹೆಸರುಗಳಲ್ಲಿವೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರವು ಸೆಪ್ಟಂಬರ್ 2022ರಲ್ಲಿ ಪಿಎಫ್ಐನ್ನು ನಿಷೇಧಿಸಿತ್ತು.
ಎಸ್ಡಿಪಿಐ 2009ರಲ್ಲಿ ಸ್ಥಾಪನೆಯಾಗಿದ್ದು, ಅದು ರಾಜಕೀಯ ಪಕ್ಷವಾಗಿ ಚುನಾವಣಾ ಆಯೋಗದಲ್ಲಿ ನೋಂದಣಿಯನ್ನೂ ಹೊಂದಿದೆ.
ಇತ್ತೀಚಿನ ಜಪ್ತಿಯೊಂದಿಗೆ ಈಡಿ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಪಿಎಫ್ಐನ ಒಟ್ಟು ಆಸ್ತಿಗಳ ಮೌಲ್ಯ ಈಗ 129 ಕೋಟಿ ರೂಪಾಯಿಗಳಾಗಿವೆ.
ಗ್ರೀನ್ ವ್ಯಾಲಿ ಫೌಂಡೇಷನ್, ಅಲಪ್ಪುಳ ಸೋಷಿಯಲ್ ಕಲ್ಚರಲ್ ಆ್ಯಂಡ್ ಎಜ್ಯುಕೇಷನ್ ಟ್ರಸ್ಟ್, ಪಟ್ಟನಂತಿಟ್ಟದ ಪಂದಳಂ ಎಜ್ಯುಕೇಷನಲ್ ಆ್ಯಂಡ ಕಲ್ಚರಲ್ ಟ್ರಸ್ಟ್, ವಯನಾಡಿನ ಇಸ್ಲಾಮಿಕ್ ಸೆಂಟರ್ ಟ್ರಸ್ಟ್, ಮಲಪ್ಪುರಂನ ಹರಿಥಂ ಫೌಂಡೇಷನ್(ಪೂವನಚಿನ), ಅಲುವಾದ ಪೆರಿಯಾರ್ ವ್ಯಾಲಿ ಚ್ಯಾರಿಟೇಬಲ್ ಟ್ರಸ್ಟ್, ಪಾಲಕ್ಕಾಡ್ ನ ವಲ್ಲವುನಾಡ್ ಟ್ರಸ್ಟ್ ನಂತಹ ವಿವಿಧ ಸಂಸ್ಥೆಗಳ ಹೆಸರುಗಳಲ್ಲಿ ನೋಂದಣಿಯಾಗಿರುವ ಆಸ್ತಿಗಳು ಮತ್ತು ತಿರುವನಂತಪುರದಲ್ಲಿಯ ಎಸ್ಡಿಪಿಐಗೆ ಸೇರಿದ ಕೆಲವು ನಿವೇಶನಗಳು ಇವುಗಳಲ್ಲಿ ಒಳಗೊಂಡಿವೆ.







