EDಯಿಂದ ಪಿಎಸಿಎಲ್ನ 1,986 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು

Photo Credit : PTI
ಹೊಸದಿಲ್ಲಿ, ಜ. 26: 48,000 ಕೋ. ರೂ. ಪೊಂಜಿ ಯೋಜನೆ ನಡೆಸುತ್ತಿದ್ದ ಆರೋಪದಲ್ಲಿ ಚಂಡಿಗಢ ಮೂಲದ ಪಿಎಸಿಎಲ್ (ಪರ್ಲ್ ಸಮೂಹ) ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ 1,986 ಕೋ.ರೂ. ಮೌಲ್ಯದ ಸೊತ್ತುಗಳನ್ನು ಹೊಸತಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಸೋಮವಾರ ತಿಳಿಸಿದೆ.
ಇತ್ತೀಚಿನ ಕ್ರಮದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯ ಒಟ್ಟು ಮೊತ್ತ 7,589 ಕೋ. ರೂ.ಗೆ ತಲುಪಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪಂಜಾಬ್ನ ಲುಧಿಯಾನ ಹಾಗೂ ರಾಜಸ್ಥಾನದ ಜೈಪುರದಲ್ಲಿರುವ 1,986.48 ಕೋ.ರೂ. ಮೌಲ್ಯದ 37 ಸ್ಥಿರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ವಂಚನೆಯಿಂದ ಸಂಗ್ರಹಿಸಲಾದ ಅಕ್ರಮ ನಿಧಿಯ ಭಾಗವನ್ನು ಈ 37 ಸೊತ್ತುಗಳ ಖರೀದಿಗೆ ಬಳಸಲಾಗಿದೆ ಎಂದು ಅದು ತಿಳಿಸಿದೆ.
ಈ ಹಿಂದೆ ಸಿಬಿಐ ಪಿಎಸಿಎಲ್ ಲಿಮಿಟೆಡ್, ಅದರ ದಿವಂಗತ ಪ್ರವರ್ತಕ ನಿರ್ಮಲ್ ಸಿಂಗ್ ಭಾಂಗೂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.





