3558 ಕೋಟಿ ರೂ. ಮೊತ್ತದ ಕ್ಲೌಡ್ ಪಾರ್ಟಿಕಲ್ ಹಗರಣದ ಸೂತ್ರಧಾರರನ್ನು ಬಂಧಿಸಿದ ಈಡಿ
ಉತ್ತರ ಪ್ರದೇಶ ಸರಕಾರ ಜೊತೆ ತಿಳುವಳಿಕಾ ಒಪ್ಪಂದ ಮಾಡಿಕೊಂಡಿದ್ದ ವಿಯುನೌ

PC : amritvichar.com
ಹೊಸದಿಲ್ಲಿ : 3558 ಕೋಟಿ ರೂ. ಪೋಂಜಿ ಸ್ಕೀಂ ಹಗರಣ (ನೋಂದಾವಣೆ ರಹಿತ ಯೋಜನೆ) ಹಾಗೂ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈಡಿ) ಬಂಧಿತರಾದ ವಿಯುನೌ ಇನ್ಫೋಟೆಕ್ ಪ್ರೈ.ಲಿಮಿಟೆಡ್ (ವಿಐಪಿಎಲ್)ನ ಸಂಸ್ಥಾಪಕ ಸುಖವೀಂದರ್ ಸಿಂಗ್ ಖರೌರ್ ಅವರು ಎರಡು ವರ್ಷಗಳ ಹಿಂದೆ ಉತ್ತರಪ್ರದೇಶ ಸರಕಾರದೊಂದಿಗೆ 13, 500 ಕೋಟಿ ರೂ. ಹೂಡಿಕೆಯೊಂದಿಗೆ ಪ್ರತಿ ಜಿಲ್ಲೆಯಲ್ಲಿ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತ ತಿಳುವಳಿಕಾ ಒಪ್ಬಂದಕ್ಕೆ ಸಹಿಹಾಕಿರುವುದು ಬೆಳಕಿಗೆ ಬಂದಿದೆ.
ಆ ಸಂದರ್ಭದಲ್ಲಿ ಉತ್ತರಪ್ರದೇಶ ಸಚಿವ ನಂದ ಗೋಪಾಲ್ ಗುಪ್ತಾ ಅವರು ಹೇಳಿಕೆಯೊಂದನ್ನು ನೀಡಿ 2023ರಲ್ಲಿ ಫೆಬ್ರವರಿಯಲ್ಲಿ ನಡೆದ ಉತ್ತರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆಸಕ್ತ ಕಂಪೆನಿಗಳು ವಿಯುನೌ ಸಮೂಹದಲ್ಲಿ ಈ ಯೋಜನೆಯಲ್ಲಿ ಹಣಹೂಡಲಿದ್ದು, ಇದರಿಂದ 6 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗಗಳು ಸೃಷ್ಟಿಯಾಗಲಿದೆಯೆಂದು ಹೇಳಿದ್ದರು.
ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಖರೌರ್ ಅವರು ಹಲವಾರು ಹಿರಿಯ ರಾಜ್ಯ ಸರಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತನಾಡುತ್ತಾ ಉತ್ತರ ಪ್ರದೇಶ ಸರಕಾರದ ನೀತಿಗಳಲ್ಲಿ ತನ್ನ ವಿಶ್ವಾಸವನ್ನು ದೃಢಪಡಿಸಿದ್ದರು.
ಆದರೆ ವಾಸ್ತವಿಕವಾಗಿ ಖರೌರ್ ಸೇರಿದಂತೆ ಈ ಕಂಪೆನಿಗಳ ಪ್ರವರ್ತಕರು ಹಾಗೂ ನಿರ್ದೇಶಕರು ಕ್ಲೌಡ್ ಪಾರ್ಟಿಕಲ್ಗಳು ಅಥವಾ ಸರ್ವರ್ಗಳ ಮೇಲೆ ಹಣ ಹೂಡಿ, ಭಾರೀ ಲಾಭಗಳಿಸುವಂತೆ ಜನರನ್ನು ಮರಳು ಮಾಡುವ ಸ್ಕೀಂ ಒಂದನ್ನು ನಡೆಸುತ್ತಿದ್ದರು. ಈ ಹೂಡಿಕೆಗಾಗಿ ವಾರ್ಷಿಕವಾಗಿ ಶೇ.48ರಷ್ಟು ಪ್ರತಿಫಲದ ಭರವಸೆಯನ್ನು ಕೂಡಾ ಅವರು ನೀಡಿದ್ದರು.
ಈ ಕಂಪೆನಿಯ ಪ್ರವರ್ತಕರು ಹಾಗೂ ನಿರ್ದೇಶಕರು, ಹೂಡಿಕೆದಾರರಿಗೆ ಕ್ಲೌಡ್ ಪಾರ್ಟಿಕಲ್ ಅಥವಾ ಕಂಪ್ಯೂಟರ್ ಸರ್ವರ್ಗಳನ್ನು ಗ್ರಾಹಕರಿಗೆ ಬಾಡಿಗೆ ನೀಡುವಂತೆ ಸೂಚಿಸಲಾಗುತ್ತಿತ್ತು ಮತ್ತು ಆರಿಂದ ಬರುವ ಆದಾಯವು ಅವರಿಗೆ ದೊರೆಯಲಿದೆಯೆಂದು ತಿಳಿಸುತ್ತಿದ್ದರೆಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ.
ಸೋದರ ಸಂಸ್ಥೆಗಳಾದ ಝೆಬಿಟಿ ರೆಂಟಲ್ ಪ್ಲಾನೆಟ್ ಪ್ರೈ. ಲಿ. (ಝಡ್ಆರ್ಪಿಎಲ್) ಹಾಗೂ ಝೆಬೈಟ್ ಇನ್ಫೋಟೆಕ್ ಪ್ರೈ.ಲಿ. (ಝಡ್ಐಪಿಎಲ್)ಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಹಳೆಯ ಹೂಡಿಕೆದಾರರಿಗೆ ಸ್ಕೀಂನ ಹೊಸ ಹೂಡಿಕೆದಾರರು ಹಣಪಾವತಿಸುವಂತೆ ಮಾಡಲಾಗುತ್ತಿತ್ತು.
ಮೈಕ್ಲೌಡ್ ಪಾರ್ಟಿಕಲ್ ಎಂಬ ಹೆಸರಿನಲ್ಲಿ ವ್ಯೆನೌ ಗ್ರೂಪ್ ಮಾರಾಟ ಮಾಡಿದ ಕ್ಲೌಡ್ ಪಾರ್ಟಿಕಲ್ ಅನ್ನು ಪ್ರತಿ ಸರ್ವರ್ಗೆ 41,253 ರೂ.ಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಈಡಿ ಆಪಾದಿಸಿದೆ.
ಖರೌರ್ ಸೂತ್ರಧಾರನಾಗಿರುವ ಈ ಬಹುಸ್ತರ ಸ್ಕೀಮ್ ಹೀಗೆ ಸುಮಾರು 3558 ಕೋಟಿ ರೂ. ನಿಧಿಯನ್ನು ಸೃಷ್ಟಿಸಿತ್ತೆನ್ನಲಾಗಿದೆ.
ನೊಯ್ಡಾದಲ್ಲಿರುವ ವಿಯುನೌ ಗ್ರೂಪ್ ಕಂಪೆನಿಯ ಆವರಣದಲ್ಲಿ ಕೇವಲ 553 ಟಿಬಿ ಸ್ಟೋರೇಜ್ ಸಾಮರ್ಥ್ಯದ 1119 ಕಂಪ್ಯೂಟರ್ ಸರ್ವರ್ಗಳನ್ನು ಇರುವುದನ್ನು ಈಡಿ ಪತ್ತೆ ಹಚ್ಚಿದೆ. ಆದರೆ ಅದು ಯಾವುದೇ ಪವರ್ಹೌಸ್ ಜೊತೆ ಸಂಪರ್ಕವನ್ನು ಹೊಂದಿರಲಿಲ್ಲ. ಕೇವಲ 1.9 ಟಿಬಿಯಷ್ಟು ಸಂಗ್ರಹ ಸಾಮರ್ಥ್ಯ ಮುಗಿದು ಹೋಗಿತ್ತೆಂದು ಏಜೆನ್ಸಿ ಮೂಲಗಳು ದಿ ಪ್ರಿಂಟ್ಗೆ ತಿಳಿಸಿವೆ.
ತಮ್ಮ ಕ್ಲೌಡ್ ಪಾರ್ಟಿಕಲ್(ಸರ್ವರ್ಗಳು)ಗಳನ್ನು ಖರೀದಿಸುವಂತೆ ಜನರನ್ನು ಮರುಳುಗೊಳಿಸಲು ಸಂಸ್ಥೆಯ ಹಲವಾರು ಕಾರ್ಯತಂತ್ರಗಳನ್ನು ಅನುಸರಿಸುತ್ತಿತ್ತೆಂದು ಮೂಲಗಳು ತಿಳಿಸಿವೆ.
ಹರ್ಯಾಣ, ಪಂಜಾಬ್ನಂತಹ ರಾಜ್ಯಗಳಲ್ಲಿ ಕಂಪೆನಿಯು ಐಶಾರಾಮಿ ಕಚೇರಿಗಳನ್ನು, ಹಿಮಾಚಲಪ್ರದೇಶ ಹಾಗೂ ಉತ್ತರಪ್ರದೇಶಗಳಲ್ಲಿ ವ್ಯೆನೌ ಡೇಟಾ ಕೇಂದ್ರಗಳನ್ನು ತೆರೆದಿತ್ತು. ಅಲ್ಲದೆ ಉತ್ತರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ಜೊತೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದರ ಬಗ್ಗೆಯೂ ವ್ಯಾಪಕ ಪ್ರಚಾರ ಮಾಡುತ್ತಿತ್ತೆಂದು ಈಡಿ ಆಪಾದಿಸಿದೆ. ಬಲ್ಗೇರಿಯಾದಂತಹ ದೇಶಗಳಲ್ಲಿಯೂ ವಿಚಾರಸಂಕಿರಣಗಳನ್ನು ಏರ್ಪಡಿಸಿ, ಕಂಪೆನಿ ಹಾಗೂ ಅದರ ವ್ಯವಹಾರಗಳ ಬೆಳವಣಿಗೆಯಾಗುತ್ತಿರುವ ಬಗ್ಗೆ ಹೂಡಿಕೆದಾರರಲ್ಲಿ ಮರಳು ಮಾಡುತ್ತಿತ್ತು.
ಕಳೆದ ವರ್ಷೆದ ಡಿಸೆಂಬರ್ನಲ್ಲಿ ಈ ಸಂಸ್ಥೆಯ ವಿರುದ್ಧ ತನಿಖೆಯಾಗುತ್ತಿರುವಾಗಲೇ, ಉತ್ತರಪ್ರದೇಶದ ಮಲಿಹಾಬಾದ್ ಹಾಗೂ ಅಂಬೇಡ್ಕರ್ ನಗರದಲ್ಲಿ ಎರಡು ಕೇಂದ್ರಗಳನ್ನು ತೆರೆದಿತ್ತು. ಅಲ್ಲದೆ ರಾಜ್ಯದ 750 ಡೇಟಾ ಕೇಂದ್ರಗಳಲ್ಲಿ ಜಾಲವೊಂದನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತ್ತು. ಆದರೆ ಎಲ್ಲೂ ಕೂಡಾ ಈ ಡೇಟಾ ಕೇಂದ್ರಗಳು ಕಾರ್ಯಾಚರಿಸುತ್ತಿಲ್ಲವಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
2002ನೇ ಸಾಲಿನ ಕಪ್ಪುಹಣ ಬಿಳುಪು ತಡೆ ಕಾಯ್ದೆಯ ವಿವಿಧ ಕಾನೂನುಗಳಡಿ ವಿಐಪಿಎಲ್ನ ಸಹೋದರ ಸಂಸ್ಥೆ ಯೂನೌ ಮಾರ್ಕೆಟಿಂಗ್ ಸರ್ವಿಸಸ್ ಲಿ.(ವಿಎಂಎಸ್ಎಲ್) ವಿರುದ್ಧ ಈಡಿನಡೆಸುತ್ತಿರುವ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಗೆ ಸಂಬಂಧಿಸಿ ಖರೌರ್ ಅವರ ಬಂಧನವಾಗಿದೆ.
ಭಾರತದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಖರೌರ್ ಹಾಗೂ ಅವರ ಪತ್ನಿ ಡಿಂಪಲ್ ಅವರನ್ನು ಹೊಸದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲಿ ಶುಕ್ರವಾರ ಬಂಧಿಸಲಾಗಿತ್ತು.







