12,000 ಕೋಟಿ ರೂ.ಅಕ್ರಮ ಹಣ ವರ್ಗಾವಣೆ ಪ್ರಕರಣ : ಈಡಿಯಿಂದ ಜೆಪೀ ಇನ್ಫ್ರಾಟೆಕ್ ಎಂಡಿ ಮನೋಜ್ ಗೌರ್ ಬಂಧನ

ಮನೋಜ್ ಗೌರ್ | Photo Credit : X
ಹೊಸ ದಿಲ್ಲಿ: 12,000ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪೀ ಇನ್ಫ್ರಾಟೆಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗೌರ್ ಅನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಖರೀದಿದಾರರಿಂದ ಸಂಗ್ರಹಿಸಿದ ನಿಧಿಯ ವರ್ಗಾವಣೆ ಹಾಗೂ ದುರ್ಬಳಕೆಯಲ್ಲಿ ಮನೋಜ್ ಗೌರ್ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ ನಂತರ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ.
ಜೆಪೀ ಸಮೂಹ ಅಂಗಸಂಸ್ಥೆಗಳಾದ ಜೆಪೀ ಇನ್ಫ್ರಾಟೆಕ್ ಲಿಮಿಟೆಡ್ ಹಾಗೂ ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ ಬೃಹತ್ ಪ್ರಮಾಣದ ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿವೆ ಎಂಬ ಆರೋಪಕ್ಕೆ ಈ ಪ್ರಕರಣ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಯು ಪ್ರಮುಖವಾಗಿ ವಸತಿ ಯೋಜನೆಗಳಿಂದ ನಿಧಿಯನ್ನು ವರ್ಗಾಯಿಸಲಾಗಿದೆ ಎಂಬ ಆರೋಪದ ಕುರಿತು ಗಮನ ಕೇಂದ್ರೀಕರಿಸಲಿದೆ. ಈ ಅವ್ಯವಹಾರದಿಂದ ಜೆಪೀ ಇನ್ಫ್ರಾಟೆಕ್ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಮನೆ ಖರೀದಿದಾರರಿಗೆ ಸಮಸ್ಯೆಯಾಗಿತ್ತು. ಅವರಿಗೆ ಇದುವರೆಗೆ ತಮ್ಮ ಫ್ಲ್ಯಾಟ್ ಗಳ ಸ್ವಾಧೀನವನ್ನು ಪಡೆಯಲು ಸಾಧ್ಯವಾಗಿಲ್ಲ.





