ಪಿಎಂಎಲ್ಎ ಪ್ರಕರಣ: ವಿವೊ ಇಂಡಿಯಾದ ಬಂಧಿತ ಮೂವರು ಹಿರಿಯ ಅಧಿಕಾರಿಗಳಿಗೆ ಮೂರು ದಿನಗಳ ಈಡಿ ಕಸ್ಟಡಿ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿತರಾದ ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಿಕೆ ಸಂಸ್ಥೆ ವಿವೋದ ಮೂವರು ಹಿರಿಯ ಅಧಿಕಾರಿಗಳನ್ನು ದಿಲ್ಲಿಯ ನ್ಯಾಯಾಲಯವೊಂದು ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಈಡಿ)ದ ವಶಕ್ಕೆ ನೀಡಿದೆ.
ವಿವೊ ಇಂಡಿಯಾದ ಮಧ್ಯಂತರ ಸಿಇಒ ಹಾಂಗ್ ಷ್ವಾನ್, ಮುಖ್ಯ ಹಣಕಾಸು ಅಧಿಕಾರಿ ಹರಿಂದರ್ ದಹಿಯಾ ಮತ್ತು ಸಲಹೆಗಾರ ಹೇಮಂತ ಮುಂಜಾಲ್ ಬಂಧಿತ ಆರೋಪಿಗಳಾಗಿದ್ದಾರೆ.
‘ಅಧಿಕಾರಿಗಳ ಪ್ರಸಕ್ತ ಕ್ರಮದಿಂದ ನಾವು ತೀವ್ರವಾಗಿ ಆತಂಕಗೊಂಡಿದ್ದೇವೆ. ಇತ್ತೀಚಿನ ಬಂಧನಗಳು ನಿರಂತರ ಕಿರುಕುಳವನ್ನು ತೋರಿಸುತ್ತಿವೆ ಮತ್ತು ಇದರಿಂದಾಗಿ ಉದ್ಯಮದಲ್ಲಿ ಅನಿಶ್ಚಿತತೆಯ ವಾತಾವರಣ ಸೃಷ್ಟಿಯಾಗಿದೆ. ನಮ್ಮ ವಿರುದ್ಧದ ಆರೋಪಗಳನ್ನು ಎದುರಿಸಲು ಎಲ್ಲ ಕಾನೂನು ಮಾರ್ಗಗಳನ್ನು ನಾವು ಬಳಸುತ್ತೇವೆ ’ ಎಂದು ವಿವೊ ವಕ್ತಾರರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾವಾ ಇಂಟರ್ನ್ಯಾಷನಲ್ನ ಆಡಳಿತ ನಿರ್ದೇಶಕ ಹರಿಓಂ ರಾಯ್, ಚೀನಿ ಪ್ರಜೆ ಗ್ವಾಂಗ್ವೆನ್ ಅಲಿಯಾಸ್ ಆ್ಯಂಡ್ರೂ ಕುವಾಂಗ್, ಚಾರ್ಟರ್ಡ್ ಅಕೌಂಟಂಟ್ಗಳಾದ ನಿತಿನ್ ಗರ್ಗ್ ಮತ್ತು ರಾಜನ್ ಮಲಿಕ್ ಅವರನ್ನು ಅ.10ರಂದು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.





