ದಿಲ್ಲಿ ಕಾರು ಸ್ಫೋಟ ಪ್ರಕರಣ : ಅಲ್ ಫಲಾಹ್ ವಿವಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಈಡಿ ದಾಳಿ

Photo Credit: PTI
ಹೊಸದಿಲ್ಲಿ : ದಿಲ್ಲಿ ಕೆಂಪು ಕೋಟೆ ಬಳಿ ನಡೆದ ಕಾರು ಸ್ಪೋಟ ಪ್ರಕರಣದ ತನಿಖೆಯ ಭಾಗವಾಗಿ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಲ್ ಫಲಾಹ್ ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ತಂಡಗಳು ಮಂಗಳವಾರ ಬೆಳಿಗ್ಗೆ ಸಂಸ್ಥೆಗೆ ಸೇರಿದ 25 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಫರಿದಾಬಾದ್ನಲ್ಲಿರುವ 70 ಎಕರೆ ವಿಸ್ತೀರ್ಣದ ವಿಶ್ವವಿದ್ಯಾಲಯದ ಓಖ್ಲಾ ಕಚೇರಿಯ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ದಿಲ್ಲಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ವೈದ್ಯ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ದಿಲ್ಲಿ ಸ್ಪೋಟ ಪ್ರಕರಣದ ಕುರಿತ ತನಿಖೆಯ ಭಾಗವಾಗಿ, ಅಲ್ ಫಲಾಹ್ ಟ್ರಸ್ಟ್ ಮತ್ತು ಸಂಬಂಧಿತ ಸಂಸ್ಥೆಗಳ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ವಿವಿಯ ಹಣಕಾಸು ಮತ್ತು ಆಡಳಿತವನ್ನು ನೋಡಿಕೊಳ್ಳುವ ಸಿಬ್ಬಂದಿಯನ್ನು ಕೂಡ ತನಿಖೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.







