17,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ | ಈಡಿಯಿಂದ ಅನಿಲ್ ಅಂಬಾನಿ ವಿಚಾರಣೆ

ಅನಿಲ್ ಅಂಬಾನಿ | PTI
ಹೊಸದಿಲ್ಲಿ,ಆ.5: 17,000 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ)ವು ಮಂಗಳವಾರ ರಿಲಯನ್ಸ್ ಗ್ರೂಪ್ ನ ಅಧ್ಯಕ್ಷ ಅನಿಲ್ ಅಂಬಾನಿಯವರನ್ನು ವಿಚಾರಣೆಗೊಳಪಡಿಸಿದೆ.
35 ಸ್ಥಳಗಳಲ್ಲಿ 50 ಕಂಪೆನಿಗಳ ದಾಖಲೆಗಳ ಪರಿಶೀಲನೆ ಮತ್ತು 25 ಜನರನ್ನು ಪ್ರಶ್ನಿಸಿದ ಮೂರು ದಿನಗಳ ಬಳಿಕ ಮಂಗಳವಾರ ಈಡಿ ಅಂಬಾನಿಯವರನ್ನು ಗುರಿಯಾಗಿಸಿಕೊಂಡಿತ್ತು. ಈಡಿ ಶೋಧ ಕಾರ್ಯಾಚರಣೆ ಸಮಯದಲ್ಲಿ ಹೆಚ್ಚಿನ ಆಕ್ಷೇಪಾರ್ಹ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳು ಪತ್ತೆಯಾದ ಬಳಿಕ ಅಂಬಾನಿಯವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ರಿಲಯನ್ಸ್ ಹೌಸಿಂಗ್ ಫೈನಾನ್ಸ್ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಸೇರಿದಂತೆ ಅಂಬಾನಿಯವರ ಕಂಪೆನಿಗಳಿಗೆ ಮಂಜೂರಾದ ಸಾಲಗಳಿಗೆ ಸಂಬಂಧಿಸಿದಂತೆ ಸೂಕ್ತ ಅನುಸರಣಾ ಕ್ರಮಗಳ ವಿವರಗಳನ್ನು ಕೋರಿ ಈಡಿ ಎಸ್ಬಿಐ, ಎಕ್ಸಿಸ್, ಐಸಿಐಸಿಐ ಮತ್ತು ಎಚ್ಡಿಎಫ್ಸಿ ಸೇರಿದಂತೆ ಒಂದು ಡಝನ್ ಬ್ಯಾಂಕುಗಳಿಗೆ ಪತ್ರಗಳನ್ನು ಬರೆದಿದೆ.
ನಿರ್ದಿಷ್ಟವಾಗಿ ಸಾಲ ಮಂಜೂರಾತಿಗಳಿಗೆ ಅನುಸರಿಸಿದ್ದ ಪ್ರಕ್ರಿಯೆ, ಸಾಲ ಮರುಪಾವತಿಗೆ ಕಾಲಮಿತಿ ಮತ್ತು ಅನುಸರಿಸಿದ ವಸೂಲಾತಿ ಕ್ರಮಗಳ ಕುರಿತು ವಿವರಗಳನ್ನು ಈಡಿಕೇಳಿದೆ.
ಒಟ್ಟಾರೆಯಾಗಿ ಸಾಲದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬ್ಯಾಂಕುಗಳು,ಹೂಡಿಕೆದಾರರು, ಶೇರುದಾರರು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸಲು ಅಂಬಾನಿ ಗ್ರೂಪ್ ನಿಂದ ‘ಲೆಕ್ಕಾಚಾರದ ಯೋಜನೆ’ಯನ್ನು ಈಡಿ ಪ್ರತಿಪಾದಿಸಿದೆ.
68 ಕೋಟಿ ರೂಪಾಯಿ ಗಳ ನಕಲಿ ಬ್ಯಾಂಕ್ ಗ್ಯಾರಂಟಿಗಳನ್ನು ಸಲ್ಲಿಸಿದ್ದಕ್ಕಾಗಿ ಕಳೆದ ವಾರ ಬಿಸ್ವಾಲ್ ಟ್ರೇಡ್ ಲಿಂಕ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಪಾರ್ಥಸಾರಥಿ ಬಿಸ್ವಾಲ್ ರನ್ನು ಈಡಿ ಬಂಧಿಸಿತ್ತು. ಇದು ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.
2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್ ನಿಂದ ಪಡೆದಿದ್ದ ಸಾಲದಲ್ಲಿ 3,000 ಕೋಟಿ ರೂಪಾಯಿ ಗಳನ್ನು ಅನ್ಯ ಉದ್ದೇಶಗಳಿಗಾಗಿ ಬಳಸಲಾಗಿತ್ತು ಎನ್ನುವುದನ್ನು ಪ್ರಾಥಮಿಕ ತನಿಖೆಯು ಬಹಿರಂಗಗೊಳಿಸಿದೆ. ಇದೇ ರೀತಿಯ,ಆದರೆ ಇದಕ್ಕಿಂತ ದೊಡ್ಡದಾದ 14,000 ಕೋಟಿ ರೂಪಾಯಿಗಳ ವಂಚನೆಯನ್ನು ರಿಲಯನ್ಸ್ ಕಮ್ಯುನಿಕೇಷನ್ಸ್ ಕೂಡ ಮಾಡಿತ್ತು ಎಂದು ಆರೋಪಿಸಲಾಗಿದೆ. ಅದು ಕೆನರಾ ಬ್ಯಾಂಕಿಗೆ 1,050 ಕೋಟಿ ರೂಪಾಯಿಗಳನ್ನು ವಂಚಿಸಿರುವ ಆರೋಪಗಳನ್ನೂ ಎದುರಿಸುತ್ತಿದೆ.
ಯೆಸ್ ಬ್ಯಾಂಕಿನ ಪ್ರವರ್ತಕರು ಸಾಲ ಮಂಜೂರಿಗೆ ಪ್ರತಿಫಲವಾಗಿ ಖಾಸಗಿ ಸಂಸ್ಥೆಗಳ ಮೂಲಕ ಕಮಿಷನ್ ಸ್ವೀಕರಿಸಿದ್ದರು ಎಂದು ಈಡಿ ಆರೋಪಿಸಿದೆ.
ಕಳಪೆ ಅಥವಾ ಪರಿಶೀಲಿಸಲ್ಪಡದ ಹಣಕಾಸು ಮೂಲಗಳನ್ನು ಹೊಂದಿದ್ದ ಕಂಪೆನಿಗಳಿಗೆ ಸಾಲ ನೀಡಿಕೆ,ಎಲ್ಲ ಕಂಪೆನಿಗಳಲ್ಲಿ ಸಾಮಾನ್ಯ ನಿರ್ದೇಶಕರು ಮತ್ತು ವಿಳಾಸಗಳ ಬಳಕೆ, ಅಗತ್ಯ ದಾಖಲೆಗಳ ಕೊರತೆ, ಶೆಲ್ ಕಂಪೆನಿಗಳಿಗೆ ಹಣ ವರ್ಗಾವಣೆ ಮತ್ತು ‘ನಿತ್ಯ ಹರಿದ್ವರ್ಣ ಸಾಲ’ ಅಂದರೆ ಹಳೆಯ ಸಾಲಗಳನ್ನು ಮರುಪಾವತಿಸಲು ಹೊಸ ಸಾಲಗಳ ಬಳಕೆಯಂತಹ ನಿದರ್ಶನಗಳನ್ನು ತನಿಖೆಯು ಪತ್ತೆ ಹಚ್ಚಿದೆ.
ಕೆಲವು ಸಾಲಗಳನ್ನು ಅರ್ಜಿ ಸಲ್ಲಿಸಿದ ದಿನವೇ ಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿತ್ತು ಮತ್ತು ಇತರ ಕೆಲವು ಸಾಲಗಳನ್ನು ಅನುಮೋದನೆಗೆ ಮೊದಲೇ ವರ್ಗಾಯಿಸಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಸಾಲಗಳು ರಿಲಯನ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಗೆ ನೀಡಿರುವ ಸಾಲಗಳನ್ನು ಒಳಗೊಂಡಿವೆ. ವಾಸ್ತವದಲ್ಲಿ ಸಂಸ್ಥೆಯ ಕಾರ್ಪೊರೇಟ್ ಸಾಲವು ವಿತ್ತವರ್ಷ 18ರಲ್ಲಿದ್ದ 3,742 ಕೋಟಿ ರೂಪಾಯಿ ಗಳಿಂದ ವಿತ್ತವರ್ಷ 19ರಲ್ಲಿ 8,670 ಕೋಟಿಗಳಿಗೆ ಜಿಗಿದಿತ್ತು.







