ಕೋಲ್ಕತ್ತಾದ IPAC ಕಚೇರಿ, ಟಿಎಂಸಿ ಐಟಿ ಮುಖ್ಯಸ್ಥರ ನಿವಾಸದ ಮೇಲೆ ಈಡಿ ದಾಳಿ

Screengrab: X/ANI
ಕೋಲ್ಕತಾ, ಜ. 8: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸರಕಾರದ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ಗುರುವಾರ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಚುನಾವಣಾ ತಂತ್ರಗಾರಿಕಾ ಸಂಸ್ಥೆ ಐ-ಪ್ಯಾಕ್ (I-PAC)ನ ಪ್ರಧಾನ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ರ ಮನೆಯಲ್ಲಿ ದಾಳಿಗಳನ್ನು ನಡೆಸಿದೆ.
ಐ-ಪ್ಯಾಕ್ ತೃಣಮೂಲ ಕಾಂಗ್ರೆಸ್ನ ಮಾಹಿತಿ ತಂತ್ರಜ್ಞಾನ ಮತ್ತು ಮಾಧ್ಯಮ ಘಟಕದ ಉಸ್ತುವಾರಿಯನ್ನೂ ವಹಿಸಿಕೊಂಡಿದೆ.
ಇದರ ಬೆನ್ನಿಗೇ ಪ್ರತೀಕ್ ಜೈನ್ರ ನಿವಾಸಕ್ಕೆ ಧಾವಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತನ್ನ ಪಕ್ಷದ ಕಂಪ್ಯೂಟರ್ ಹಾರ್ಡ್ ಡಿಸ್ಕ್ಗಳು ಹಾಗೂ ಆಂತರಿಕ ದಾಖಲೆಗಳು ಮತ್ತು ಸೂಕ್ಷ್ಮ ದತ್ತಾಂಶಗಳನ್ನು ವಶಪಡಿಸಿಕೊಳ್ಳಲು ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರ ತನಿಖೆ ಭಾಗವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅನುಷ್ಠಾನ ನಿರ್ದೇಶನಾಲಯ ಹೇಳಿದೆ.
ಜೈನ್ರ ನಿವಾಸ ಮತ್ತು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಆಕ್ರೋಶಗೊಂಡಿರುವಂತೆ ಕಂಡುಬಂದರು. ಗದ್ದಲದ ನಡುವೆಯೇ ಮಾಧ್ಯಮಗಳ ಜನರನ್ನು ಪಕ್ಕಕ್ಕೆ ಸರಿಸುತ್ತಾ ಅವರು ಮುಂದುವರಿದರು.
ಬಳಿಕ, ದಾಳಿಗಳ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಜಾರಿ ನಿರ್ದೇಶನಾಲಯವು, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ‘‘ಸಾಕ್ಷ್ಯಗಳನ್ನು ಆಧರಿಸಿ ದಾಳಿಗಳನ್ನು ನಡೆಸಲಾಗಿದೆಯೇ ಹೊರತು, ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿಲ್ಲ’’ ಎಂದು ಹೇಳಿದೆ.
‘‘ಪಶ್ಚಿಮ ಬಂಗಾಳದ ಆರು ಸ್ಥಳಗಳು ಮತ್ತು ದಿಲ್ಲಿಯ ನಾಲ್ಕು ಸ್ಥಳಗಳು ಸೇರಿದಂತೆ ಹತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ’’ ಎಂದು ಈಡಿ ತಿಳಿಸಿದೆ.
‘‘ನಗದು ಹಣ ವಿತರಣೆ ಮತ್ತು ಹವಾಲಾ ಸಾಗಾಟಕ್ಕೆ ಸಂಬಂಧಿಸಿ ವಿವಿಧ ಸ್ಥಳಗಳಲ್ಲಿ ಶೋಧಗಳನ್ನು ನಡೆಸಲಾಗಿದೆ. ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಲಾಗಿಲ್ಲ. ಯಾವುದೇ ಚುನಾವಣೆಗೆ ಸಂಬಂಧಿಸಿ ಶೋಧ ನಡೆಸಲಾಗುತ್ತಿಲ್ಲ. ಇದು ಅಕ್ರಮ ಹಣ ವರ್ಗಾವಣೆ ವಿರುದ್ಧದ ನಿಯಮಿತ ಕಾರ್ಯಾಚರಣೆಯಾಗಿದೆ’’ ಎಂದು ಅದು ಹೇಳಿದೆ.
ಕೇಂದ್ರೀಯ ಅರೆಸೈನಿಕ ಪಡೆಯೊಂದರ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಈಡಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
ಪಕ್ಷದ ದಾಖಲೆಗಳನ್ನು ಹೊರಗೆ ಸಾಗಿಸಿದ ಮಮತಾ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಮಧ್ಯಾಹ್ನ ಸುಮಾರು 12:40ರ ಸಮಯಕ್ಕೆ ಕೋಲ್ಕತಾ ಸಾಲ್ಟ್ಲೇಕ್ನಲ್ಲಿರುವ ಕಟ್ಟಡವೊಂದರ 11ನೇ ಮಹಡಿಯಲ್ಲಿರುವ ಟಿಎಮ್ಸಿಯ ಮಾಹಿತಿ ತಂತ್ರಜ್ಞಾನ ಘಟಕ ಹಾಗೂ ಐ-ಪ್ಯಾಕ್ ಕಚೇರಿಯನ್ನು ತಲುಪಿದರು.
ಈ ಸಂದರ್ಭದಲ್ಲಿ, ಭಾರೀ ಗದ್ದಲದ ನಡುವೆಯೇ, ತೃಣಮೂಲ ಕಾಂಗ್ರೆಸ್ಗೆ ಸೇರಿದ ಭಾರೀ ಪ್ರಮಾಣದ ದಾಖಲೆಗಳನ್ನು ಕಚೇರಿಯಿಂದ ಹೊರತರಲಾಯಿತು ಹಾಗೂ ಅವುಗಳನ್ನು ಕಾರೊಂದರಲ್ಲಿ ಇಡಲಾಯಿತು. ಈ ಕಾರನ್ನು ರಾಜ್ಯ ಪೊಲೀಸರು ಸುತ್ತುವರಿದಿದ್ದರು.
ನಮ್ಮ ಚುನಾವಣಾ ದತ್ತಾಂಶಗಳನ್ನು ದೋಚಲು ಬಿಜೆಪಿಯಿಂದ ಪಿತೂರಿ: ಮಮತಾ ವಾಗ್ದಾಳಿ
ನಮ್ಮ ಪಕ್ಷದ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಪ್ರತೀಕ್ ಜೈನ್ರ ನಿವಾಸದ ಮೇಲೆ ಅನುಷ್ಠಾನ ನಿರ್ದೇಶನಾಲಯ ನಡೆಸಿರುವ ದಾಳಿಯು ‘‘ರಾಜಕೀಯ ಪ್ರೇರಿತ ಮತ್ತು ಅಸಾಂವಿಧಾನಿಕ’’ವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
‘‘ಅವರು ನಮ್ಮ ಐಟಿ ಮುಖ್ಯಸ್ಥನ ನಿವಾಸಕ್ಕೆ ದಾಳಿ ಮಾಡಿದ್ದಾರೆ. ಅವರು ನನ್ನ ಪಕ್ಷದ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಈ ಹಾರ್ಡ್ ಡಿಸ್ಕ್ಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳ ವಿವರಗಳಿವೆ. ನಾನು ಅವುಗಳನ್ನು ವಾಪಸ್ ತಂದಿದ್ದೇನೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
‘‘ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಸಿದುಕೊಳ್ಳುವುದು ಗೃಹ ಸಚಿವ ಅಮಿತ್ ಶಾ ಮತ್ತು ಅನುಷ್ಠಾನ ನಿರ್ದೇಶನಾಲಯದ ಕೆಲಸವೇ? ಒಂದು ವೇಳೆ ನಾನು ಬಿಜೆಪಿ ಪಕ್ಷದ ಕಚೇರಿಗೆ ಹೋದರೆ ಏನಾದೀತು? ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಐದು ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಚುನಾವಣೆ ಇದೆ ಎಂಬ ಒಂದೇ ಕಾರಣಕ್ಕಾಗಿ ಅವರು ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಒಯ್ಯುತ್ತಿದ್ದಾರೆ’’ ಎಂದು ಮಮತಾ ಹೇಳಿದರು.
‘‘ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಕಚೇರಿಗಳ ಮೇಲೆ ನಾವು ದಾಳಿ ನಡೆಸಿದರೆ ಏನಾದೀತು? ನಾವು ಸಂಯಮ ವಹಿಸುತ್ತಿದ್ದೇವೆ’’ ಎಂದರು.
‘‘ನಿಮಗೆ (ಬಿಜೆಪಿ) ನಮ್ಮೊಂದಿಗೆ ಹೋರಾಡಲು ಸಾಧ್ಯವಾಗದಿದ್ದರೆ, ನೀವು ಬಂಗಾಳಕ್ಕೆ ಯಾಕೆ ಬರುತ್ತೀರಿ?’’ ಎಂದು ಪ್ರಶ್ನಿಸಿದ ಅವರು, ‘‘ಪ್ರಜಾಸತ್ತಾತ್ಮಕವಾಗಿ ಟಿಎಂಸಿಯನ್ನು ಸೋಲಿಸಿ’’ ಎಂಬದಾಗಿ ಬಿಜೆಪಿಗೆ ಸವಾಲು ಹಾಕಿದರು.
‘‘ನಮ್ಮ ದಾಖಲೆಗಳು, ನಮ್ಮ ತಂತ್ರಗಾರಿಕೆಗಳು, ನಮ್ಮ ಮತದಾರರು, ನಮ್ಮ ದತ್ತಾಂಶಗಳು, ನಮ್ಮ ಬಂಗಾಳವನ್ನು ದೋಚಲು ನೀವು ಕೇಂದ್ರ ಸರಕಾರದ ಸಂಸ್ಥೆಗಳನ್ನು ಬಳಸುತ್ತಿದ್ದೀರಿ. ಇದರ ಪರಿಣಾಮವಾಗಿ ನೀವು ಗೆಲ್ಲಬಹುದಾಗಿರುವ ಸ್ಥಾನಗಳ ಸಂಖ್ಯೆ ಶೂನ್ಯಕ್ಕೆ ಕುಸಿಯಲಿದೆ. ಪ್ರಧಾನಿಯವರೇ, ನಿಮ್ಮ ಗೃಹ ಸಚಿವರನ್ನು ದಯವಿಟ್ಟು ಹದ್ದುಬಸ್ತಿನಲ್ಲಿಡಿ’’ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಮಮತಾ ಭೇಟಿ ಅನೈತಿಕ: ಬಿಜೆಪಿ
ಜಾರಿ ನಿರ್ದೇಶನಾಲಯದ ದಾಳಿಯ ವೇಳೆ ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ರ ನಿವಾಸಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿರುವುದು ‘‘ಅಸಾಂವಿಧಾನಿಕ ಹಾಗೂ ಕೇಂದ್ರೀಯ ಸಂಸ್ಥೆಗಳ ತನಿಖೆಯಲ್ಲಿ ಮಾಡಿರುವ ಹಸ್ತಕ್ಷೇಪ’’ ಎಂಬುದಾಗಿ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಬಣ್ಣಿಸಿದ್ದಾರೆ.
‘‘ಮುಖ್ಯಮಂತ್ರಿ ಮತ್ತು ಕೋಲ್ಕತಾ ಪೊಲೀಸ್ ಕಮಿಶನರ್ರ ಭೇಟಿ ಅನೈತಿಕ, ಅಸಾಂವಿಧಾನಿಕ ಮತ್ತು ಕೇಂದ್ರೀಯ ಸಂಸ್ಥೆಯ ತನಿಖೆಯಲ್ಲಿ ಮಾಡಿರುವ ನೇರ ಹಸ್ತಕ್ಷೇಪವಾಗಿದೆ ಎಂದು ನನಗನಿಸುತ್ತದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.







