ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಗುರುಗ್ರಾಮ ಕಚೇರಿಗಳಲ್ಲಿ ಈಡಿ ಶೋಧ
ಸೂಪರ್ಟೆಕ್ ವಿರುದ್ಧ ಪಿಎಂಎಲ್ಎ ಪ್ರಕರಣ
ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆ | Photo: NDTV
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (PMLA)ಯಡಿ ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್ಟೆಕ್ ಮತ್ತು ಅದರ ಪ್ರವರ್ತಕರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯ (ED)ವು ಗುರುಗ್ರಾಮದಲ್ಲಿಯ ಡಿಎಲ್ಎ ಸೇರಿದ ಆವರಣಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
ಕಳೆದೆರಡು ದಿನಗಳ ಕಾರ್ಯಾಚರಣೆಗಳಲ್ಲಿ ಸೂಪರ್ಟೆಕ್ ವಿರುದ್ಧ ನಡೆಯುತ್ತಿರುವ ತನಿಖೆಗೆ ನೇರವಾಗಿ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಈಡಿ ವಶಪಡಿಸಿಕೊಂಡಿದೆ.
ಸುದ್ದಿಸಂಸ್ಥೆಯು ವರದಿ ಮಾಡಿರುವಂತೆ ಈ ಶೋಧ ಕಾರ್ಯಾಚರಣೆಗಳು ಇತರ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿವೆಯೇ ಹೊರತು ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ ಗೆ ಸಂಬಂಧಸಿದ್ದಲ್ಲ.
ವಹಿವಾಟುಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪರಿಶೀಲಿಸಲು ಈಡಿ ಅಧಿಕಾರಿಗಳು ಬಯಸಿದ್ದರು ಮತ್ತು ಕಂಪನಿಯು ಅದಕ್ಕೆ ಸಹಕರಿಸಿದೆ ಎಂದು ವರದಿಯು ತಿಳಿಸಿದೆ.
ಈಡಿಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ಟೆಕ್ ನ ಪ್ರವರ್ತಕ ರಾಮ್ ಕಿಶೋರ್ ಅರೋರಾರನ್ನು ಕಳೆದ ಜುಲೈನಲ್ಲಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ದಿಲ್ಲಿ,ಹರ್ಯಾಣ,ಮತ್ತು ಉತ್ತರ ಪ್ರದೇಶದ ಪೋಲಿಸ್ ಇಲಾಖೆಗಳಲ್ಲಿ ಸೂಪರ್ಟೆಕ್ ಲಿ. ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ದಾಖಲಾಗಿರುವ 26 ಎಫ್ಐಆರ್ ಗಳನ್ನು ಆಧರಿಸಿ ಈಡಿಪಿಎಂಎಲ್ಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಸಂಸ್ಥೆಗಳು 670 ಮನೆ ಖರೀದಿದಾರರಿಗೆ ಒಟ್ಟು 164 ಕೋ.ರೂ.ಗಳನ್ನು ವಂಚಿಸಿವೆ ಎಂದು ಆರೋಪಿಸಲಾಗಿದೆ.