“ಸೆನ್ಸಾರ್ಶಿಪ್ ಕಡೆಗೆ ಹೆಜ್ಜೆ”: ಅದಾನಿ ಕುರಿತ ವರದಿಗಳ ತಡೆಗೆ ಎಡಿಟರ್ಸ್ ಗಿಲ್ಡ್ ಆಕ್ರೋಶ

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ದಿಲ್ಲಿ ನ್ಯಾಯಾಲಯವು ಅದಾನಿ ಎಂಟರ್ಪ್ರೈಸಸ್ ವಿರುದ್ಧ ಮಾನಹಾನಿ ಮೊಕದ್ದಮೆಯ ಸಂಬಂಧ ತಾತ್ಕಾಲಿಕ ತಡೆಯಾಜ್ಞೆ ಹೊರಡಿಸಿದ್ದು, ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಹಲವು ಸುದ್ದಿ ವರದಿಗಳು, ಯೂಟ್ಯೂಬ್ ಲಿಂಕ್ಗಳು ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ಗಳನ್ನು ತೆಗೆದುಹಾಕಲು ಆದೇಶಿಸಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 6 ರಂದು ರೋಹಿಣಿ ನ್ಯಾಯಾಲಯದ ವಿಶೇಷ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಪತ್ರಕರ್ತರಾದ ಪರಂಜೋಯ್ ಗುಹಾ ಠಾಕುರ್ತಾ, ರವಿ ನಾಯರ್, ಅಬೀರ್ ದಾಸ್ಗುಪ್ತಾ, ಅಯಸ್ಕಂತ್ ದಾಸ್ ಮತ್ತು ಆಯುಷ್ ಜೋಶಿ ಸೇರಿದಂತೆ ಹಲವರ ವಿರುದ್ಧ ತಡೆಯಾಜ್ಞೆ ಹೊರಡಿಸಿದ್ದರು. paranjoy.in, adaniwatch.org ಮತ್ತು adanifiles.com.au ವೆಬ್ಸೈಟ್ಗಳಿಗೆ ಸಹ ಅದಾನಿ ಎಂಟರ್ಪ್ರೈಸಸ್ ಕುರಿತಾದ “ಮಾನಹಾನಿಕರ ವಿಷಯ” ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದರು.
ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 16 ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 12 ಮಾಧ್ಯಮ ಸಂಸ್ಥೆಗಳು ಹಾಗೂ ಸ್ವತಂತ್ರ ಪತ್ರಕರ್ತರಿಗೆ 138 ಯೂಟ್ಯೂಬ್ ಲಿಂಕ್ಗಳು ಮತ್ತು 83 ಇನ್ಸ್ಟಾಗ್ರಾಮ್ ಪೋಸ್ಟ್ಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿತು.
ನ್ಯೂಸ್ಲಾಂಡ್ರಿ, ದಿ ವೈರ್, HW ನ್ಯೂಸ್ ಸೇರಿದಂತೆ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರಾದ ರವೀಶ್ ಕುಮಾರ್, ಅಜಿತ್ ಅಂಜುಮ್, ಆಕಾಶ್ ಬ್ಯಾನರ್ಜಿ ಮತ್ತು ಧ್ರುವ್ ರಾಠಿ ಸೇರಿದಂತೆ ಅನೇಕರು ಈ ಪಟ್ಟಿಯಲ್ಲಿ ಸೇರಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಎಡಿಟರ್ಸ್ ಗಿಲ್ಡ್, “ಒಂದು ಕಾರ್ಪೊರೇಟ್ ಸಂಸ್ಥೆಗೆ ನೀಡಲಾಗಿರುವ ಇಂತಹ ಅಧಿಕಾರಗಳು ಮತ್ತು ಸರ್ಕಾರದ ತೆಗೆದುಹಾಕುವ ನಿರ್ದೇಶನಗಳು ಸೆನ್ಸಾರ್ಶಿಪ್ ಕಡೆಗೆ ಒಂದು ಹೆಜ್ಜೆಯಾಗಿದೆ. ಇದು ಕಾನೂನುಬದ್ಧ ವರದಿ, ವಿಶ್ಲೇಷಣೆ ಹಾಗೂ ವಿಡಂಬನೆಗಳನ್ನು ತಣ್ಣಗಾಗಿಸುವ ಪ್ರಯತ್ನ. ಇದು ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದೆ.
ಮಾನಹಾನಿ ಪ್ರಕರಣಗಳನ್ನು ಸರಿಯಾದ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಪರಿಹರಿಸಬೇಕು, ಏಕಪಕ್ಷೀಯ ತಡೆಯಾಜ್ಞೆಗಳ ಮೂಲಕ ಅಲ್ಲ. ಕಾರ್ಯನಿರ್ವಾಹಕ ಅಧಿಕಾರದ ಅತಿಯಾದ ವಿಸ್ತರಣೆ ಖಾಸಗಿ ನಿಗಮಗಳಿಗೆ “ತೆಗೆದುಹಾಕುವ ಅಧಿಕಾರ” ನೀಡಿರುವುದು ಗಂಭೀರ ವಿಚಾರವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಎಚ್ಚರಿಸಿದೆ.
ಅದಾನಿ ಎಂಟರ್ಪ್ರೈಸಸ್ ತನ್ನ ವಿರುದ್ಧ ಪ್ರಕಟವಾದ ವರದಿಗಳು ಕಂಪೆನಿಯ ಖ್ಯಾತಿಗೆ ಹಾನಿ ಮಾಡಿದ್ದು, ಪಾಲುದಾರರಿಗೆ ಶತಕೋಟಿ ಡಾಲರ್ ನಷ್ಟ ಉಂಟುಮಾಡಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದೆ. ನ್ಯಾಯಾಲಯವು ಪ್ರತಿವಾದಿಗಳಿಗೆ ತಮ್ಮ ಲೇಖನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಐದು ದಿನಗಳಲ್ಲಿ ತೆಗೆದುಹಾಕುವಂತೆ ನಿರ್ದೇಶಿಸಿದೆ.
ಕೇಂದ್ರದ ಆದೇಶದಂತೆ, ಗೂಗಲ್ ಮತ್ತು ಮೆಟಾ ಕಂಪೆನಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಇದರಲ್ಲಿ ತನಿಖಾ ವರದಿಗಳು ಮಾತ್ರವಲ್ಲದೆ, ವಿಡಂಬನಾತ್ಮಕ ವೀಡಿಯೊಗಳು ಹಾಗೂ ಅದಾನಿ ಗ್ರೂಪ್ ಉಲ್ಲೇಖಗಳನ್ನೂ ತೆಗೆದುಹಾಕುವಂತೆ ಸೂಚಿಸಲಾಗಿದೆ.







