ಟ್ರಂಪ್ ಆಡಳಿತದಿಂದ ಭಾರತೀಯ ಸರಕುಗಳಿಗೆ ಶೇ.50 ʼಸುಂಕʼಷ್ಟ; ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿ ಯೋಜನೆ ತಡೆಹಿಡಿದ ಭಾರತ

ಡೊನಾಲ್ಡ್ ಟ್ರಂಪ್ | PC : X
ಮುಂಬೈ,ಆ.8: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ಶೇ.50ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದ ಬಳಿಕ, ಕೇಂದ್ರ ಸರಕಾರವು ಅಮೆರಿಕದಿಂದ ನೂತನ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳನ್ನು ಖರೀದಿಸುವ ತನ್ನ ಯೋಜನೆಯನ್ನು ತಡೆಹಿಡಿದಿದೆ. ಆ ಮೂಲಕ ಭಾರತವು ಟ್ರಂಪ್ ನಡೆಗೆ ತಾನು ತೀವ್ರ ಅಸಮಾಧಾನಗೊಂಡಿರುವ ಬಗ್ಗೆ ಸ್ಪಷ್ಟ ಸಂದೇಶವನ್ನು ನೀಡಿದೆ.
ಅಮೆರಿಕದಿಂದ ಶಸ್ತ್ರಾಸ್ತ್ರಗನ್ನು ಖರೀದಿ ಬಗ್ಗೆ ಘೋಷಿಸಲು ಭಾರತವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ವಾಶಿಂಗ್ಟನ್ ಗೆ ಕಳುಹಿಸುವ ಯೋಜನೆಯನ್ನು ಹೊಂದಿತ್ತು. ಆದರೆ ಆ ಪ್ರವಾಸವನ್ನು ರದ್ದುಪಡಿಸಲಾಗಿದೆಯೆಂದು ಈ ವಿದ್ಯಮಾನಗಳ ಬಗ್ಗೆ ಮಾಹಿತಿಯಿರುವ ಇಬ್ಬರು ಉನ್ನತ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಸರಕಾರವು ರಶ್ಯದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡನೆಯಾಗಿ ಭಾರತದ ಸರಕುಗಳ ಮೇಲೆ ಅಮೆರಿಕವು ಆಗಸ್ಟ್ 6ರಂದು ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿತ್ತು. ತೈಲ ಖರೀದಿಯಿಂದಾಏಗಿ ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಹಣಕಾಸು ನೆರವು ನೀಡಿದಂತಾಗುತ್ತದೆಯೆಂದು ಡೊನಾಲ್ಡ್ ಟ್ರಂಪ್ ಅವರು ಆಪಾದಿಸಿದ್ದರು. ಇದರೊಂದಿಗೆ ಅಮೆರಿಕವು ಆಮದು ಮಾಡಿಕೊಳ್ಳುವ ಭಾರತೀಯ ಸರಕುಗಳ ಮೇಲೆ ಟ್ರಂಪ್ ಒಟ್ಟು ಶೇ.50 ಸುಂಕವನ್ನು ವಿಧಿಸಿದಂತಾಗಿದೆ. ಅಮೆರಿಕದ ಇತರ ಯಾವುದೇ ವ್ಯಾಪಾರಿ ಪಾಲುದಾರ ರಾಷ್ಟ್ರಗಳ ಪೈಕಿ ವಿಧಿಸಲಾಗಿರುವ ಗರಿಷ್ಠ ಸುಂಕ ಇದಾಗಿದೆ.
ಅಮೆರಿಕದ ‘ಜನರಲ್ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ’ ನಿರ್ಮಾಣದ ಸ್ಟ್ರೈಕರ್ ಸಮರ ವಾಹನಗಳು ಹಾಗೂ ‘ರೆಥೊಯೆನ್ ಆ್ಯಂಡ್ ಲಾಕ್ ಹೀಡ್ ಮಾರ್ಟಿನ್ ಕಂಪೆನಿ’ ಅಭಿವೃದ್ಧಿಪಡಿಸಿದ ಟ್ಯಾಂಕ್ನ ನಿರೋಧಕ ಕ್ಷಿಪಣಿಗಳ ಖರೀದಿಗೆ ಸಂಬಂಧಿಸಿದ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆಯೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ತಿಳಿಸಿದೆ.
ಭಾರತೀಯ ಸರಕುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಟ್ರಂಪ್ ಆಡಳಿತ ಶೇ.50ಕ್ಕೇರಿಸಿದ ಬಳಿಕ ಈ ಬೆಳವಣಿಗೆಯಾಗಿದೆಯೆಂದು ವರದಿ ತಿಳಿಸಿದೆ.
ಈ ರಕ್ಷಣಾ ಸಾಮಾಗ್ರಿಗಳ ಖರೀದಿ ಹಾಗೂ ಜಂಟಿ ಉತ್ಪಾದನೆಯ ಕುರಿತಾದ ಯೋಜನೆಗಳನ್ನು ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಶಿಂಗ್ಟನ್ ಗೆ ಭೇಟಿ ನೀಡಿದ ಸಂದರ್ಭ ಟ್ರಂಪ್ ಅವರ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು.
ರಾಜ್ನಾಥ್ ಸಿಂಗ್ ಅವರು, ಈಗ ರದ್ದಾಗಿರುವ ಅಮೆರಿಕ ಪ್ರವಾಸದ ವೇಳೆ ಭಾರತೀಯ ನೌಕಾಪಡೆಗಾಗಿ ಆರು ಬೋಯಿಂಗ್ ಪಿ8ಐ ರಿಕೊನೈಸ್ಸಾನ್ಸ್ ವಿಮಾನ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಗಳ ಖರೀದಿಯನ್ನು ಪ್ರಕಟಿಸಲಿದ್ದರೆಂದು ರಾಯ್ಟರ್ಸ್ ವರದಿ ತಿಳಿಸಿದೆ. 3.6 ಶತಕೋಟಿ ಡಾಲರ್ ಮೊತ್ತದ ಪ್ರಸ್ತಾವಿತ ವಿಮಾನ ಖರೀದಿ ಯೋನಜೆ ಇದರೊಂದಿಗೆ ನೆನೆಗುದಿಗೆ ಬಿದ್ದಂತಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.







