ಮಹಾರಾಷ್ಟ್ರದಲ್ಲಿ ಪ್ರತಿ ನಿತ್ಯ ಎಂಟು ರೈತರ ಆತ್ಮಹತ್ಯೆ?: ಭಾಗಶಃ ಸತ್ಯ ಎಂದು ಒಪ್ಪಿಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 56 ತಿಂಗಳಲ್ಲಿ ಪ್ರತಿ ನಿತ್ಯ ಸರಾಸರಿ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಭಾಗಶಃ ಸತ್ಯ ಎಂದು ಸೋಮವಾರ ಮಹಾರಾಷ್ಟ್ರ ಪರಿಹಾರ ಮತ್ತು ಪುನರ್ವಸತಿ ಸಚಿವ ಮಕರಂದ್ ಜಾಧವ್ ಪಾಟೀಲ್ ಒಪ್ಪಿಕೊಂಡಿದ್ದಾರೆ.
ವಿಧಾನ ಪರಿಷತ್ ನ ಶೂನ್ಯ ವೇಳೆಯಲ್ಲಿ ಎನ್ಸಿಪಿ ಶಾಸಕ ಶಿವಾಜಿರಾವ್ ಗರ್ಜೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ, ಛತ್ರಪತಿ ಸಂಭಾಜಿನಗರ ಹಾಗೂ ಅಮರಾವತಿ ವಿಭಾಗಗಳಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಪ್ರಮಾಣ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ರೈತರ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಸಂಗತಿಗಳು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸರಕಾರದ ಪ್ರಯತ್ನಗಳ ಕುರಿತು ಅವರು ಸದನಕ್ಕೆ ವಿವರಿಸಿದರು.
ಸಚಿವ ಜಾಧವ್ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ಮರಾಠವಾಡ ವಿಭಾಗದಲ್ಲಿ 952 ರೈತರು, ಅಕೋಲ ವಿಭಾಗದಲ್ಲಿ 168 ರೈತರು, ವಾರ್ಧಾ ವಿಭಾಗದಲ್ಲಿ 112 ರೈತರು, ಬೀಡ್ ವಿಭಾಗದಲ್ಲಿ 205 ರೈತರು ಹಾಗೂ ಅಮರಾವತಿ ವಿಭಾಗದಲ್ಲಿ 1,069 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2024ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ, ಛತ್ರಪತಿ ಸಂಭಾಜಿನಗರ ವಿಭಾಗದಲ್ಲಿ 952 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 707 ರೈತ ಕುಟುಂಬಗಳು ನೆರವು ಪಡೆಯಲು ಅರ್ಹವಾಗಿದ್ದು, 433 ಪ್ರಕರಣಗಳಲ್ಲಿನ ಕುಟುಂಬಗಳು ನೆರವನ್ನು ಸ್ವೀಕರಿಸಿವೆ.
ಬೀಡ್ ಜಿಲ್ಲೆಯಲ್ಲಿ 167 ಪ್ರಕರಣಗಳನ್ನು ನೆರವಿಗಾಗಿ ಅನುಮೋದಿಸಲಾಗಿದ್ದು, ಈ ಪೈಕಿ 108 ಪ್ರಕರಣಗಳಲ್ಲಿನ ಕುಟುಂಬಗಳು ಹಣಕಾಸು ನೆರವನ್ನು ಸ್ವೀಕರಿಸಿವೆ.
ಅಮರಾವತಿ ವಿಭಾಗದಲ್ಲಿ 441 ಪ್ರಕರಣಗಳು ನೆರವಿಗೆ ಅರ್ಹವಾಗಿದ್ದು, ಈ ಪೈಕಿ 332 ಕುಟುಂಬಗಳು ನೆರವು ಸ್ವೀಕರಿಸಿವೆ ಎಂದು ಸಚಿವರು ತಿಳಿಸಿದ್ದಾರೆ.
ನಿರ್ದಿಷ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಾಧವ್, ಎಪ್ರಿಲ್ 2023ರಿಂದ ಸೆಪ್ಟೆಂಬರ್ 2024ರ ನಡುವೆ ಜಲ್ನಾ ಜಿಲ್ಲೆಯಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ನೆರವು ಒದಗಿಸಲು ಸರಕಾರ ಬದ್ಧವಾಗಿದೆ” ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.







