"ಏಕನಾಥ್ ಶಿಂದೆ ಅಸಮಾಧಾನಗೊಂಡಿಲ್ಲ": ವದಂತಿಗಳನ್ನು ತಳ್ಳಿ ಹಾಕಿದ ಶಿವಸೇನೆ
ಏಕನಾಥ್ ಶಿಂದೆ (Photo: PTI)
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯ ಕುರಿತು ನಿರ್ಣಯ ಕೈಗೊಳ್ಳುವಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದ ಅಸಮಾಧಾನಗೊಂಡಿರುವ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂದೆ, ಮಹಾಯುತಿ ಮೈತ್ರಿಕೂಟದ ಸಭೆಯನ್ನು ರದ್ದುಗೊಳಸಿ ತಮ್ಮ ತವರು ಗ್ರಾಮಕ್ಕೆ ತೆರಳಿದ್ದಾರೆ ಎಂಬ ವದಂತಿಗಳನ್ನು ಶಿವಸೇನೆ ತಳ್ಳಿ ಹಾಕಿದೆ. ಏಕನಾಥ್ ಶಿಂದೆ ಅನಾರೋಗ್ಯಕ್ಕೊಳಗಾಗಿದ್ದು, ಶನಿವಾರ ಮಹಾಯುತಿ ಮೈತ್ರಿಕೂಟದ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಸ್ಪಷ್ಟನೆ ನೀಡಿದೆ.
ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕತ್ವವನ್ನು ಭೇಟಿ ಮಾಡಿದ ನಂತರ, ಏಕನಾಥ್ ಶಿಂದೆ ತಮ್ಮ ತವರು ಸತಾರಾಗೆ ತೆರಳಿದ್ದರಿಂದ ಸಚಿವ ಸ್ಥಾನ ಹಂಚಿಕೆ ಹಾಗೂ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ಮತ್ತಷ್ಟು ವಿಳಂಬಗೊಂಡಿವೆ ಎಂದು ವರದಿಯಾಗಿದೆ.
“ಅವರು ಅಸಮಾಧಾನಗೊಂಡಿಲ್ಲ. ಅವರ ಆರೋಗ್ಯ ಸರಿಯಿಲ್ಲ. ಅವರು ಅಸಮಾಧಾನಗೊಂಡಿರುವುದರಿಂದ ತಮ್ಮ ತವರಿಗೆ ತೆರಳಿದ್ದಾರೆ ಎಂದು ಹೇಳುವುದು ಸರಿಯಲ್ಲ. ನಾನು ಮುಖ್ಯಮಂತ್ರಿ ಹುದ್ದೆಗಾಗಿ ಅಳುವುದಿಲ್ಲ, ಬದಲಿಗೆ ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಈ ವದಂತಿಗಳು ತಪ್ಪು” ಎಂದು ರಾಜ್ಯ ಸಚಿವ ಸ್ಥಾನದಿಂದ ನಿರ್ಗಮಿಸುತ್ತಿರುವ ಉದಯ್ ಸಮಂತ್ ಹೇಳಿದ್ದಾರೆ.
“ನಾಳೆ ಅವರು ಮರಳಲಿದ್ದು, ಸಭೆಗಳು ಖುದ್ದು ಹಾಜರಾತಿಯಿಂದಲೇ ನಡೆಯಬೇಕು ಎಂದೇನೂ ಇಲ್ಲ. ಸಭೆಗಳು ವಿಡಿಯೊ ಕಾನ್ಫರೆನ್ಸ್ ಅಥವಾ ಮೊಬೈಲ್ ಸಂಪರ್ಕದ ಮೂಲಕವೂ ನಡೆಯಲು ಸಾಧ್ಯವಿದೆ. ಏಕನಾಥ್ ಶಿಂದೆ ಹೇಳಿರುವಂತೆ ಮಹಾರಾಷ್ಟ್ರ ಸಂಪುಟ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ” ಎಂದೂ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಸರಕಾರ ರಚನೆ ಕುರಿತ ಮುಂದಿನ ಮಹಾಯುತಿ ಮೈತ್ರಿಕೂಟದ ಸಭೆಯನ್ನು ಶುಕ್ರವಾರ ಮುಂಬೈನಲ್ಲಿ ನಡೆಸಲಾಗುವುದು ಎಂದು ಏಕನಾಥ್ ಶಿಂದೆ ಮಾಹಿತಿ ನೀಡಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದ ಮಹಾಯುತಿ ಮೈತ್ರಿಕೂಟ, 288 ಸ್ಥಾನಗಳ ಪೈಕಿ 233 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಈ ಪೈಕಿ ಬಿಜೆಪಿ 132, ಶಿವಸೇನೆ 57 ಹಾಗೂ ಎನ್ಸಿಪಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ, ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದಿದ್ದರೂ, ಮುಖ್ಯಮಂತ್ರಿ ಹುದ್ದೆಯ ಕುರಿತು ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಮಹಾಯುತಿ ಮೈತ್ರಿಕೂಟದ ಮಿತ್ರಪಕ್ಷಗಳು ವಿಫಲಗೊಂಡಿವೆ.